ಮುಂಬೈ,ಜ.25 (DaijiworldNews/HR): "ಜೈ ಶ್ರೀರಾಮ್ ರಾಜಕೀಯ ಘೋಷಣೆಯಲ್ಲ, ಇದು ನಂಬಿಕೆಯ ವಿಷಯ ಹಾಗಾಗಿ ಈ ಘೋಷಣೆಯಿಂದ ಯಾರೊಬ್ಬರ ಜಾತ್ಯತೀತತೆಗೂ ಧಕ್ಕೆ ಉಂಟಾಗುವುದಿಲ್ಲ" ಎಂದು ರಾಜ್ಯಸಭೆ ಸದಸ್ಯ, ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಕೊಲ್ಕತ್ತಾದಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದಾಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿರೋಧ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ರಾವತ್, "ಭಗವಾನ್ ರಾಮ ಈ ದೇಶದ ಹೆಮ್ಮೆ. ಇದು ನಂಬಿಕೆಗೆ ಸಂಬಂಧಿಸಿದೆ. ಮಮತಾ ದೀದಿಗೂ ಭಗವಾನ್ ಶ್ರೀರಾಮನ ಮೇಲೆ ನಂಬಿಕೆ ಇರುವ ಬಗ್ಗೆ ನನಗೆ ಖಾತ್ರಿಯಿದೆ" ಎಂದರು.
ಇನ್ನುಈ ಕುರಿತು ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ, "ಅಂದು ಜೈ ಶ್ರೀರಾಮ್ ಘೋಷಣೆ ಕೇಳಿ ಮಮತಾ ಬ್ಯಾನರ್ಜಿ ವಿಚಲಿತರಾಗುವ ಅಗತ್ಯವಿರಲಿಲ್ಲ. ಅಲ್ಲದೆ, ಘೋಷಣೆ ಕೂಗಿದವರ ಜೊತೆ ಮಮತಾ ಮಾತು ಮುಂದುವರಿಸಿದ್ದರೆ ಗಲಾಟೆ ಆಗುತ್ತಿತ್ತೇನೋ? ಆದರೆ, ಎಲ್ಲ ಮತ ಬ್ಯಾಂಕ್ಗಳತ್ತ ಗಮನ ಕೇಂದ್ರೀಕರಿಸಿದ್ದಾರೆ" ಎಂದು ಉಲ್ಲೇಖಿಸಲಾಗಿದೆ.