ಬೆಂಗಳೂರು,ಜ.25 (DaijiworldNews/HR): ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳ ಮರುಎಣಿಕೆಯಲ್ಲಿ ಕಡಿಮೆ ಅಂಕ ನೀಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಚಿವ ಎಸ್. ಸುರೇಶ್ ಕುಮಾರ್ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳಿಗೆ ಅಕೌಂಟೆನ್ಸಿ ವಿಷಯದಲ್ಲಿ 99 ಅಂಕ ಬಂದಾಗ ತನಗೆ 100 ಅಂಕ ಬರಬೇಕಿತ್ತೆಂದು ಉತ್ತರಪತ್ರಿಕೆಯನ್ನು ತರಿಸಿ ನೋಡಿದಾಗ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿ ತನಗೆ ಒಂದು ಅಂಕ ಕಡಿಮೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಮರುಎಣಿಕೆಗೆ ಅರ್ಜಿ ಸಲ್ಲಿಸಿದಾಗ 88 ಅಂಕಗಳು ಬಂದಿದ್ದವು. ಈ ಕುರಿತು ವಿದ್ಯಾರ್ಥಿನಿಯು ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಮರುಎಣಿಕೆಗೆ ಆದೇಶಿಸಿದ್ದು, ಆ ನಂತರ ವಿದ್ಯಾರ್ಥಿನಿಗೆ 100 ಅಂಕಗಳು ಬಂದಿದ್ದವು ಎನ್ನಲಾಗಿದೆ.
ಇನ್ನು ವಿದ್ಯಾರ್ಥಿನಿಯ ಮರು ಎಣಿಕೆಯಲ್ಲಿ ಲೋಪ ಎಸಗಿದ ಅಧಿಕಾರಿ, ಉಪನ್ಯಾಸಕರು ಮತ್ತು ಸಂಬಂಧಿಸಿದ ಸಿಬ್ಬಂದಿಯ ವಿರುದ್ಧ ಅಗತ್ಯ ಕ್ರಮಕೈಗೊಳ್ಳಲು ಸಂಬಂಧಿಸಿದವರ ವಿವರಗಳೊಂದಿಗೆ ಎರಡು ದಿನಗಳೊಳಗೆ ವರದಿ ಸಲ್ಲಿಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಚಿವರು ಸೂಚಿಸಿದ್ದಾರೆ.