ನವದೆಹಲಿ, ಜ.25 (DaijiworldNews/MB) : ಗಡಿ ಬಿಕ್ಕಟ್ಟಿನ ಶಮನಕ್ಕೆ ಸಂಬಂಧಿಸಿ ಗಡಿಯಿಂದ ಸೇನೆ ವಾಪಾಸ್ ಪಡೆದುಕೊಳ್ಳುವ ವಿಚಾರದಲ್ಲಿ ಮಾತುಕತೆ ನಡೆಯುತ್ತಿರುವ ನಡುವೆಯೇ ಉತ್ತರ ಸಿಕ್ಕಿಂನ ನಾಕುಲಾ ಪ್ರದೇಶದ್ಲ ಗಡಿಯಲ್ಲಿ ಭಾರತದ ಒಳಗೆ ನುಗ್ಗಲು ಪ್ರಯತ್ನಿಸಿದ ಚೀನಾ ಸೈನಿಕರ ಜೊತೆ ಭಾರತ ಸೈನಿಕರಿಗೆ ಸಂಘರ್ಷ ನಡೆದಿದ್ದು, ಉಭಯ ದೇಶದ ಸೈನಿಕರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆಯೂ ಭಾರತೀಯ ಸೇನೆಯು ಚೀನಾ ಸೈನಿಕರನ್ನು ಹಿಂದಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾದ ಸುಮಾರು 20 ಸೈನಿಕರು ಹಾಗೂ ಭಾರತದ ನಾಲ್ವರು ಸೈನಿಕರಿಗೆ ಗಾಯವಾಗಿದೆ ಎಂದು ವರದಿ ತಿಳಿಸಿದೆ. ಸಿಕ್ಕಿಂ ಗಡಿಯಲ್ಲಿ ಈಗ ಪ್ರಕ್ಷುಬ್ಧ ಪರಿಸ್ಥಿತಿ ಇದೆ ಎನ್ನಲಾಗಿದೆ.
ಪೂರ್ವ ಲಡಾಖ್ ಭಾಗದಿಂದ ಸೇನೆಯನ್ನು ಹಿಂಪಡೆದುಕೊಳ್ಳುವ ವಿಚಾರದಲ್ಲಿ ಭಾರತ ಮತ್ತು ಚೀನಾ ಸೇನೆ ಅಧಿಕಾರಿಗಳ ಮಧ್ಯೆ ಸುಮಾರು 16 ಗಂಟೆ ವಿಸ್ತೃತ ಚರ್ಚೆಯಾಗಿದೆ. ರವಿವಾರ ಬೆಳಿಗ್ಗೆ 10.30 ಗಂಟೆಗೆ ಈ ಸೇನೆಯ ಕಮಾಂಡರ್ ಹಂತದ ಮಾತುಕತೆಯು ಆರಂಭವಾಗಿದ್ದು ಸೋಮವಾರ ಬೆಳಗಿನ ಜಾವ 2.30 ಗಂಟೆಗೆ ಮುಕ್ತಾಯವಾಗಿದೆ.