ನವದೆಹಲಿ, ಜ.25 (DaijiworldNews/MB) : ಪೂರ್ವ ಲಡಾಖ್ ಭಾಗದಿಂದ ಸೇನೆಯನ್ನು ಹಿಂಪಡೆದುಕೊಳ್ಳುವ ವಿಚಾರದಲ್ಲಿ ಭಾರತ ಮತ್ತು ಚೀನಾ ಸೇನೆ ಅಧಿಕಾರಿಗಳ ಮಧ್ಯೆ ಸುಮಾರು 16 ಗಂಟೆ ವಿಸ್ತೃತ ಚರ್ಚೆಯಾಗಿದೆ ಎಂದು ಸೇನೆ ಮೂಲಗಳು ಸೋಮವಾರ ತಿಳಿಸಿವೆ.
ರವಿವಾರ ಬೆಳಿಗ್ಗೆ 10.30 ಗಂಟೆಗೆ ಈ ಸೇನೆಯ ಕಮಾಂಡರ್ ಹಂತದ ಮಾತುಕತೆಯು ಆರಂಭವಾಗಿದ್ದು ಸೋಮವಾರ ಬೆಳಗಿನ ಜಾವ 2.30 ಗಂಟೆಗೆ ಮುಕ್ತಾಯವಾಗಿದೆ ಎಂದು ವರದಿಯಾಗಿದ್ದು ಮಾತುಕತೆ ಬಳಿಕ ಚೀನಾ-ಭಾರತ ಕೈಗೊಂಡ ತಾರ್ಕಿಕ ನಿರ್ಧಾರದ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.
ಚರ್ಚೆಯಲ್ಲಿ ಭಾರತವು ಗಡಿಯಿಂದ ಚೀನಾದ ಸೇನೆ ವಾಪಾಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದೆ. ಭಾರತವೂ ಕೂಡಾ ಸೇನೆಯನ್ನು ಹಿಂಪಡೆಯಲಿದ್ದು ಒಂದೇ ಸಮಯದಲ್ಲಿ ಈ ಕಾರ್ಯ ನಡೆಯಬೇಕು. ಭಾಗಶಃ ಸೇನಾಪಡೆ ಹಿಂಪಡೆಯುವುದನ್ನು ನಾವು ಒಪ್ಪಲಾರೆವು ಎಂದು ಭಾರತ ಸ್ಪಷ್ಟಪಡಿಸಿದೆ. ಪೂರ್ವಲಡಾಖ್ ಭಾಗದಲ್ಲಿ ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಇದ್ದ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬುದು ಭಾರತದ ಆಗ್ರಹವಾಗಿದೆ.
ಭಾರತವು ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿದ ಯೋಧನೊಬ್ಬನನ್ನು ಚೀನಾಗೆ ಒಪ್ಪಿಸಿದ ಎರಡು ವಾರದ ಬಳಿಕ ಈ ಮಾತುಕತೆ ನಡೆದಿದ್ದು, ಈ ಬಗ್ಗೆ ಸಕರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.
ಸುಮಾರು 1 ಲಕ್ಷದಷ್ಟು ಚೀನಾ ಮತ್ತು ಭಾರತದ ಯೋಧರು ಪೂರ್ವ ಲಡಾಖ್ ಭಾಗದಲ್ಲಿ ಉಭಯ ಭಾಗದಲ್ಲಿ ಜಮಾವಣೆಯಾಗಿದ್ದು ಈ ಸಂಘರ್ಷದ ವಾತಾವರಣದ ಶಮನಕ್ಕಾಗಿ ರಾಜತಾಂತ್ರಿಕ ಮತ್ತು ಸೇನಾ ಹಂತದ ಮಾತುಕತೆ ನಡೆಯುತ್ತಿದೆ. ಆದರೆ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿಯಿದೆ.