ಪುತ್ತೂರು, ಜ.25 (DaijiworldNews/MB) : ಕೇಂದ್ರ ಸರ್ಕಾರ ಪ್ರತೀ ವರ್ಷ ಗಣರಾಜ್ಯೋತ್ಸವದ ದಿನ ನೀಡುವ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ಪ್ರಶಸ್ತಿಗೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಾಲಕ, ಸೇರಿದಂತೆ ಕರ್ನಾಟಕದ ಇಬ್ಬರ ಸಹಿತ ಒಟ್ಟು 32 ಮಕ್ಕಳು ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣಗೆ ವಿಜ್ಞಾನ ಅನ್ವೇಷಣೆ ವಿಭಾಗದಲ್ಲಿ ಈ ಪುರಸ್ಕಾರ ದೊರಕಿದ್ದು, ದಿಲ್ಲಿ ಆರ್ಮಿ ಪಬ್ಲಿಕ್ ಸ್ಕೂಲಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಬೆಂಗಳೂರಿನ ವೀರ್ ಕಶ್ಯಪ್ ಪ್ರಶಸ್ತಿಗೆ ಆಯ್ಕೆಯಾದ ಕನ್ನಡಿಗರಾಗಿದ್ದಾರೆ.
ಬನ್ನೂರು ನಿವಾಸಿ ರವಿಶಂಕರ್ ನೆಕ್ಕಿಲ ಮತ್ತು ಡಾ.ದುರ್ಗಾರತ್ನಾ ದಂಪತಿಯ 15 ವರ್ಷದ ಪುತ್ರ ರಾಕೇಶ್ ಕೃಷ್ಣ ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಅವರು ಭಾರತ ಸರಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಇನ್ ಸ್ಪೈರ್ ಅವಾರ್ಡ್ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದರು. ಹಾಗೆಯೇ ಜಪಾನಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಕಾರ್ಯಕ್ರಮಕ್ಕೆ ಅವರು ಆಯ್ಕೆಯಾಗಿದ್ದಾರೆ.
ಇನ್ನು ಕೊರೊನಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಹಾವು-ಏಣಿ ಮಾದರಿಯ 'ಕೊರೊನಾ ಯುಗ' ಎಂಬ ವಿಶಿಷ್ಟ ಆಟ ಕಂಡುಹಿಡಿದಿದವರಾಗಿದ್ದಾರೆ ಬೆಂಗಳೂರಿನ 10 ವರ್ಷದ ವೀರ್ ಕಶ್ಯಪ್.
ಪ್ರತೀ ವರ್ಷವು ಕೇಂದ್ರ ಸರ್ಕಾರ ಬಾಲ ಪ್ರತಿಭೆಗಳನ್ನು ಗುರುತಿಸಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡುತ್ತದೆ. ಪ್ರಶಸ್ತಿಯ ಪದಕ 1 ಲಕ್ಷ ರೂ. ನಗದನ್ನು ಸೇರಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಜೇತರೊಂದಿಗೆ ಇಂದು ಮಧ್ಯಾಹ್ನ 12 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ಇನ್ನು ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ರಾಕೇಶ್ ಕೃಷ್ಣ ಮತ್ತು ವೀರ್ ಕಶ್ಯಪ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರು ಅವರು, 'ಆವಿಷ್ಕಾರ ವಿಭಾಗದಲ್ಲಿ ಈ ಬಾರಿಯ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ದಕ್ಷಿಣ ಕನ್ನಡದ 15 ವರ್ಷದ ಕೆ. ರಾಕೇಶ್ ಕೃಷ್ಣ ಮತ್ತು ಬೆಂಗಳೂರಿನ 10 ವರ್ಷದ ವೀರ್ ಕಶ್ಯಪ್ಗೆ ಅಭಿನಂದನೆಗಳು. ನಿಮ್ಮ ಸಾಧನೆ ರಾಜ್ಯಕ್ಕೆ ಹೆಮ್ಮೆ ತರುವ ಜೊತೆಗೆ ಇತರ ಮಕ್ಕಳಿಗೆ ಮಾದರಿಯಾಗಿದೆ' ಎಂದು ಹೇಳಿದ್ದಾರೆ.