ಡೆಹ್ರಾಡೂನ್, ಜ.25 (DaijiworldNews/MB) : ಬಿಜೆಪಿ ಅಧಿಕಾರದಲ್ಲಿರುವ ಉತ್ತರಾಖಂಡದ ಪುಟ್ಟ ಗ್ರಾಮವೊಂದು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ. ''ಬಿಜೆಪಿ ರೈತ ವಿರೋಧಿ ಧೋರಣೆ ಹೊಂದಿರುವ ಹಿನ್ನೆಲೆ ಅವರಿಗೆ ಈ ಗ್ರಾಮಕ್ಕೆ ಪ್ರವೇಶಿಸಲು ಅವಕಾಶವಿಲ್ಲ'' ಎನ್ನುತ್ತಾರೆ ಈ ಗ್ರಾಮಸ್ಥರು.
ಉಧಾಂಸಿಂಗ್ ನಗರ ಜಿಲ್ಲೆಯ ಮಲ್ಪುರಿ ಎಂಬ ಗ್ರಾಮದಲ್ಲಿ ಈ ನಿಷೇಧ ಹೇರಲಾಗಿದೆ. ಹಾಗೆಯೇ ರೈತ ವಿರೋಧಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಿಗೆ ಎಚ್ಚರಿಕೆ ಎಂದು ಹೇಳುವಂತಹ ಪೋಸ್ಟರ್, ಬ್ಯಾನರ್ ಹಾಗೂ ಹೋರ್ಡಿಂಗ್ಗಳನ್ನು ಹಾಕಲಾಗಿದೆ. ಅಷ್ಟೇ ಅಲ್ಲದೇ, ''ಯಾರದರೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಈ ಗ್ರಾಮಕ್ಕೆ ಬರುವ ಪ್ರಯತ್ನ ಮಾಡಿದರೆ ಅವರ ಭದ್ರತೆಗೆ ಯಾರೂ ಜವಾಬ್ದಾರರಲ್ಲ'' ಎಂಬ ಎಚ್ಚರಿಕೆಯನ್ನು ಕೂಡಾ ನೀಡಲಾಗಿದೆ.
''ಈಗಾಗಲೇ 70 ಮಂದಿ ರೈತರು ಈ ಪ್ರತಿಭಟನೆಯ ವೇಳೆ ಸಾವನ್ನಪ್ಪಿದ್ದಾರೆ. ಆದರೆ ಬಿಜೆಪಿ ಸರ್ಕಾರ ಯಾವುದೇ ಕನಿಕರವನ್ನೂ ಹೊಂದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಗ್ರಾಮಕ್ಕೆ ಬಿಜೆಪಿಗರನ್ನು ಪ್ರವೇಶಿಸಲು ಬಿಡುವುದಿಲ್ಲ'' ಎನ್ನುತ್ತಾರೆ ಗ್ರಾಮಸ್ಥರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಲ್ಲಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಹಲವು ಸುತ್ತಿನ ಮಾತುಕತೆಯು ವಿಫಲವಾಗಿದೆ. ಗಣರಾಜ್ಯೋತ್ಸವದ ದಿನವಾದ ಮಂಗಳವಾರ ರೈತರು ದೆಹಲಿಯಲ್ಲಿ ಟ್ರಾಕ್ಟರ್ ಪರೇಡ್ ನಡೆಸಲಿದ್ದಾರೆ. ಈ ದಿನವೇ ದೇಶದಾದ್ಯಂತ ಪರೇಡ್, ರ್ಯಾಲಿ, ಪ್ರತಿಭಟನೆಗಳು ನಡೆಯಲಿದೆ.