ಹಾಸನ, ಜ.25 (DaijiworldNews/MB) : ''ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕೃತ ನಿವಾಸದ ಬಳಿ ಪ್ರತಿಭಟನೆ ನಡೆಸುವುದು ನ್ಯಾಯಯುತವಲ್ಲ'' ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಈ ಸರ್ಕಾರವು ಜಿಲ್ಲೆಯ ಅನುದಾನ ಕಡಿತಗೊಳಿಸಿದೆ. ಆ ಹಿನ್ನೆಲೆ ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಾಗಿ ಮುಖ್ಯಮಂತ್ರಿ ನಿವಾಸದ ಎದುರು ಧರಣಿ ನಡೆಸಲು ನಿರ್ಧರಿಸಿದ್ದರು. ಆದರೆ ಈಗ ನಾವು ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುವ ಅವಶ್ಯಕತೆಯಿಲ್ಲ'' ಎಂದು ಹೇಳಿದರು.
''ಮುಖ್ಯಮಂತ್ರಿಗಳು ಸಮಯ ನೀಡಿದರೆ ಜಿಲ್ಲೆಯೆ ಎಲ್ಲಾ ಜೆಡಿಎಸ್ ಶಾಸಕರನ್ನು ಸಿಎಂ ಬಳಿ ಕರೆದುಕೊಂಡು ಹೋಗಲಾಗುವುದು. ಮುಖ್ಯಮಂತ್ರಿಗಳ ನಿವಾಸಕ್ಕೆ ಸೋಮವಾರ ಭೇಟಿ ನೀಡಲು ಅವಕಾಶ ನೀಡುತ್ತಾರೆ ಎಂಬ ನಂಬಿಕೆ ಇದೆ'' ಎಂದು ಹೇಳಿದರು.
''1996ನೇ ಸಾಲಲ್ಲಿ ನಾನು ಪ್ರಧಾನಿಯಾಗಿದ್ದಾಗ ಹಾಸನದ ಬೂವನಹಳ್ಳಿ ಬಳಿ 560 ಎಕರೆ ಭೂಮಿಯನ್ನು ವಿಮಾನ ನಿಲ್ದಾಣ ಅಥಾರಿಟಿಗೆ ನೀಡಲಾಗಿದೆ. ಆದರೆ ನನಗೀಗ 88 ವರ್ಷವಾಗಿದೆ. ನಾನು ಸಾಯುವುದಕ್ಕೂ ಮೊದಲು ಆ ವಿಮಾನ ನಿಲ್ದಾಣಕ್ಕೆ ಚಾಲನೆ ದೊರಕಲಿ ಯಡಿಯೂರಪ್ಪರವರೆ'' ಎಂದರು.