ಶಿವಮೊಗ್ಗ, ಜ.25 (DaijiworldNews/MB) : ''ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಸ್ಫೋಟಕ ವಸ್ತುಗಳನ್ನು ಆಂಧ್ರಪ್ರದೇಶದಿಂದ ತಂದಿರಬಹುದು'' ಎಂದು ಸಚಿವ ಆರ್.ಅಶೋಕ್ ಹೇಳಿದರು.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಸ್ಫೋಟಕ ವಸ್ತುಗಳನ್ನು ಆಂಧ್ರಪ್ರದೇಶದಿಂದ ತಂದಿರಬಹುದು. ಇಂತಹ ಸ್ಫೋಟಕ ವಸ್ತುಗಳು ರಾಜ್ಯದಲ್ಲಿ ದೊರೆಯುವುದಿಲ್ಲ'' ಎಂದರು.
''ಎಷ್ಟು ಪ್ರಮಾಣದ ಸ್ಫೋಟಕ ವಸ್ತುಗಳನ್ನು ರಾಜ್ಯಕ್ಕೆ ತರಲಾಗಿದೆ?, ಆ ಲಾರಿಯು ಕರ್ನಾಟಕಕ್ಕೆ ಹೇಗೆ ಬಂತು?, ಶಿವಮೊಗ್ಗದವರೆಗೂ ಹೇಗೆ ಬಂತು?, ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ'' ಎಂದು ಹೇಳಿದರು.
''ಗಣಿಗಾರಿಕೆ ಸಲುವಾಗಿ ಸ್ಫೋಟಕ ವಸ್ತುಗಳನ್ನು ತರಲಾಗಿದೆ. ಬೇರೆ ಯಾವ ಉದ್ದೇಶದಿಂದಲೂ ಅಲ್ಲ. ಹಾಗೆ ಬೇರೆ ಉದ್ದೇಶದಿಂದ ತಂದಿದ್ದರೆ, ಭಾರೀ ಅನಾಹುತವೇ ನಡೆಯುತ್ತಿತ್ತು'' ಎಂದು ಹೇಳಿದರು.
''ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲ್ಲ. ರಾಜ್ಯದ ಪೊಲೀಸರೇ ಸಮರ್ಥರಿದ್ದು ಪ್ರಕರಣದ ಸಮಗ್ರ ತನಿಖೆ ನಡೆಯಲಿದೆ. ಸ್ಫೋಟಕ ಸಾಮಾಗ್ರಿಗಳ ಖರೀದಿಯ ಕಾನೂನು ಮತ್ತಷ್ಟು ಬಿಗಿಗೊಳಿಸಲಾಗುವುದು'' ಎಂದರು.