ಬೆಂಗಳೂರು, ಜ.25 (DaijiworldNews/MB) : ''ಸ್ವಾವಲಂಬಿ ಭಾರತ ಯೋಜನೆಯಡಿ ದೇಶದಲ್ಲಿ ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ದೇಶದಲ್ಲಿ ಎರಡು ಪ್ಲಾಸ್ಟಿಕ್ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೇಂದ್ರದಿಂದ ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ 40 ಕೋ.ರೂ. ನೀಡಲಾಗುತ್ತದೆ'' ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ''ಕರ್ನಾಟಕದ ಕರಾವಳಿ ನಗರ ಮಂಗಳೂರು ಹಾಗೂ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಒಂದೊಂದು ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸಲು ಇತ್ತೀಚೆಗೆ ನಡೆದ ರಾಸಾಯನಿಕ ಇಲಾಖೆಯ ಯೋಜನೆ ಚಾಲನಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಕೇಂದ್ರದಿಂದ ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ ಯೋಜನಾ ವೆಚ್ಚದ 50 ಪ್ರತಿಶತದಷ್ಟು ಹಣ 40 ಕೋಟಿ ರೂ. ಕೇಂದ್ರ ಸರ್ಕಾರವು ನೀಡಲಿದ್ದು ಉಳಿದ ಹಣವನ್ನು ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಸ್ಐಡಿಸಿ) ಯಂತಹ ಸಂಸ್ಥೆಗಳ ಮೂಲಕ ಅಥವಾ ನೂತನ ವಿಶೇಷ ಉದ್ದೇಶದೊಡನೆ ಪಡೆದುಕೊಳ್ಳಬಹುದು'' ಎಂದು ಮಾಹಿತಿ ನೀಡಿದರು.
''ಯೋಜನೆಗಾಗಿ ಆರು ತಿಂಗಳಲ್ಲಿ ಅಂತಿಮ ಅನುಮತಿ ಪಡೆಯಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆದ್ದರಿಂದ ಯೋಜನೆ ಯಾವ ವಿಳಂಬವಿಲ್ಲದೆ ಜಾರಿಯಾಗುವ ನಿರೀಕ್ಷೆ ಇದೆ'' ಎಂದು ಹೇಳಿದರು.
''ವಿವಿಧ ಕಾರಣಗಳಿಗಾಗಿ ಸ್ಥಗಿತಗೊಂಡಿದ್ದ ನಾಲ್ಕು ರಸಗೊಬ್ಬರ ಕಾರ್ಖಾನೆಗಳನ್ನು ಪುನಶ್ಚೇತನ ಮಾಡಲಾಗುತ್ತಿದೆ. ಇದಕ್ಕಾಗಿ 50 ಸಾವಿರ ಕೋಟಿ ರೂಪಾಯಿಗಿಂತ ಅಧಿಕ ವೆಚ್ಚವಾಗುತ್ತದೆ. ಈ ಪೈಕಿ ರಾಮಗುಂಡಮ್ ಸ್ಥಾವರದ ಕೆಲಸ ಬಹುತೇಕ ಮುಗಿದಿದೆ'' ಎಂದು ಹೇಳಿದರು.