ಶಿವಮೊಗ್ಗ, ಜ 24(DaijiworldNews/SM): ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಅಕ್ರಮ ಗಣಿಗಾರಿಗೆ ಅವಕಾಶ ನೀಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದ್ದು, ಈ ಬಗ್ಗೆ ಸಿಎಂ ಬಿ.ಎಸ್.ವೈ ಸ್ಪಷ್ಟನೆ ನೀಡಿದ್ದಾರೆ.
ಅನಧಿಕೃತ ಕಲ್ಲು ಗಣಿಗಾರಿಕೆಯ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಎಂದು ತಾನು ಹೇಳಿಲ್ಲ ಎಂಬುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅನಧಿಕೃತ ಗಣಿಗಾರಿಕೆ ನಡೆಸುವವರು ಅಧಿಕೃತಗೊಳಿಸಲು ಅರ್ಜಿ ಸಲ್ಲಿಸಬೇಕು. ಆದರೆ, ಅವರಿಗೆ ಕಾನೂನಿನಲ್ಲಿ ಅವಕಾಶವಿದ್ದರೆ ಮಾತ್ರ ಗಣಿಗಾರಿಕೆಯನ್ನು ಸಕ್ರಮಗೊಳಿಸಬಹುರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಬರುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಕಟ್ಟಳೆಗಳನ್ನು ಪೂರೈಸುವ ಗಣಿಗಾರಿಕೆಗಳನ್ನು ಮಾತ್ರ ಸಕ್ರಮಗೊಳಿಸುವಂತೆ ನಾನು ಅಧಿಕಾರಿಗಳಿಗೆ ಹೇಳಿದ್ದೇನೆ. ಎಲ್ಲೂ ಕೂಡ ಅನಧಿಕೃತ ಗಣಿಗಾರಿಕೆಗೆ ಅವಕಾಶ ನೀಡಿ ಎಂದಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.