ನವದೆಹಲಿ, ಜ.24 (DaijiworldNews/MB) : ಗಣರಾಜ್ಯೋತ್ಸವದಂದು ದೆಹಲಿಯ ರಾಜಪಥದಲ್ಲಿ ನಡೆಯಲಿರುವ ಪರೇಡ್ನಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ ಟ್ಯಾಬ್ಲೋ ಇದೇ ಮೊದಲ ಬಾರಿಗೆ ಭಾಗಿಯಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್, ''ಪರೇಡ್ನಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ ಟ್ಯಾಬ್ಲೋ ಭಾಗವಹಿಸಲಿದೆ. ಲಡಾಖ್ನ ಟ್ಯಾಬ್ಲೋದಲ್ಲಿ ಈ ಪ್ರದೇಶದಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದಾದ ಲೇಹ್ ಜಿಲ್ಲೆಯ ಥಿಕ್ಸೆ ಬೆಟ್ಟದ ಮೇಲಿರುವ ಸುಂದರ ಥಿಕ್ಸೆ ಮಠವನ್ನು ಹೊಂದಿರಲಿದೆ'' ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು ಕೇಂದ್ರ ಸರ್ಕಾರವು 2019 ರ ಆಗಸ್ಟ್ 5 ರಂದು ರದ್ದುಗೊಳಿಸಿದ್ದು, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸಿದೆ.
ಇನ್ನು ಈ ಬಾರಿಯ ಪರೇಡ್ನಲ್ಲಿ ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಟ್ಯಾಬ್ಲೋ ಹಾಗೂ ರಾಫೇಲ್ ಯುದ್ಧ ವಿಮಾನಗಳು ಇರಲಿದೆ. ಉತ್ತರ ಪ್ರದೇಶದ ಟ್ಯಾಬ್ಲೋದಲ್ಲಿ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿ ಇರಲಿದೆ. ಕರ್ನಾಟಕದ ಟ್ಯಾಬ್ಲೋ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಹಂಪಿಯ ಸ್ಮಾರಕದ ಪ್ರತಿಕೃತಿಯನ್ನು ಹೊಂದಿರಲಿದೆ.
ಪಂಜಾಬಿನ ಟ್ಯಾಬ್ಲೋದಲ್ಲಿ ಒಂಬತ್ತನೇ ಸಿಖ್ ಗುರು ಶ್ರೀ ಗುರು ತೇಜ್ ಬಹದ್ದೂರ್ ಅವರ ಸರ್ವೋಚ್ಚ ತ್ಯಾಗದ ವಿಷಯವಿರಲಿದ್ದು, ಉತ್ತರಾಖಂಡದ ಟ್ಯಾಬ್ಲೋದಲ್ಲಿ 'ಕೇದಾರಖಂಡ್'ನ ಪ್ರದರ್ಶನ ಇರಲಿದೆ.
ಏತನ್ಮಧ್ಯೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಈ ಗಣರಾಜ್ಯೋತ್ಸವ ದಿನದಂದೇ ಟ್ರಾಕ್ಟರ್ ಪರೇಡ್ ನಡೆಸಲಿದ್ದಾರೆ.