ಮುಂಬೈ, ಜ.24 (DaijiworldNews/MB) : ''ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 1,100 ಕೋಟಿ ವೆಚ್ಚವಾಗುವ ಸಾಧ್ಯತೆಯಿದೆ'' ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಹೇಳಿದರು.
ರಾಮ ಮಂದಿರ ನಿರ್ಮಾಣ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಅವರು, ''ಮುಖ್ಯ ದೇವಾಲಯ ನಿರ್ಮಾಣಕ್ಕೆ 300–400 ಕೋಟಿ ತಗುಲುತ್ತದೆ. ಸಂಪೂರ್ಣ 70 ಎಕರೆ ಜಮೀನಿನ ಅಭಿವೃದ್ಧಿಗೆ 1,100 ಕೋಟಿ ವೆಚ್ಚವಾಗಬಹುದು. ನಿರ್ಮಾಣ ಕಾರ್ಯ ಪೂರ್ಣವಾಗಲು ಸುಮಾರು ಮೂರು ವರ್ಷಗಳು ಬೇಕಾಗುತ್ತದೆ. ತಜ್ಞರೊಂದಿಗೆ ಮಾತುಕತೆ ನಡೆಸಿ ಈ ವೆಚ್ಚ ಅಂದಾಜು ಮಾಡಲಾಗಿದೆ'' ಎಂದು ತಿಳಿಸಿದರು.
''ಕೆಲವು ಕಾರ್ಪೊರೇಟ್ ಕಂಪನಿಗಳು ದೇಣಿಗೆ ನೀಡುವುದಾಗಿ ಹೇಳಿದೆ. ಆದರೆ ಇದಕ್ಕೂ ಮೊದಲು ರಾಮ ಮಂದಿರದ ವಿನ್ಯಾಸ ನೀಡಿದರೆ, ನಾವೇ ನಿರ್ಮಿಸಿಕೊಡುತ್ತೇವೆ ಎಂದು ಹೇಳಿದ್ದವು. ನಾವು ಮಾತ್ರ ಈ ಮನವಿಯನ್ನು ನಿರಾಕರಿಸಿದ್ದು, ಜನರ ದೇಣಿಗೆಯಿಂದಲ್ಲೇ ಮಂದಿರ ನಿರ್ಮಾಣ ಮಾಡುತ್ತೇವೆ'' ಎಂದರು.
ಇನ್ನು ಬಿಜೆಪಿಯು ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುತ್ತಾ 2024ರ ಲೋಕಸಭಾ ಚುನಾವಣೆಯ ಪ್ರಚಾರ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ''ಜನರು ಕನ್ನಡಕ ಯಾವ ಬಣ್ಣದ್ದು ಧರಿಸುತ್ತಾರೋ, ಅದೇ ಬಣ್ಣದ ದೃಶ್ಯ ಕಾಣುತ್ತದೆ. ಆದರೆ ನಾವು ಯಾವ ಕನ್ನಡಕವನ್ನು ಧರಿಸಿಲ್ಲ'' ಎಂದು ತಿರುಗೇಟು ನೀಡಿದರು.