ಹುಮನಾಬಾದ, ಜ.24 (DaijiworldNews/HR): ಶಿವಮೊಗ್ಗದ ಹುಣಸೋಡು ಸ್ಪೋಟ ಪ್ರಕರಣವನ್ನು ಕರ್ನಾಟಕದ ಪೊಲೀಸರೇ ಸಮಗ್ರ ತನಿಖೆ ನಡೆಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವ ಸಾಮರ್ಥ್ಯ ನಮ್ಮ ಅಧಿಕಾರಿಗಳು ಹೊಂದಿದ್ದಾರೆ" ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹುಣಸೋಡು ಸ್ಪೋಟ ಸಂಭವಿಸಿದ ಸ್ಥಳಕ್ಕೆ ಖುದ್ದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿ ನೀಡಿ ಪರಿಶಿಲನೆ ನಡೆಸಿ ಪ್ರಕರಣದ ಮಾಹಿತಿ ಪಡೆದು ಕೊಂಡಿದ್ದಾರೆ. ಅಲ್ಲದೆ, ನಮ್ಮ ರಾಜ್ಯದ ಪೊಲೀಸರು ಪ್ರಕರಣದ ಸಮಗ್ರ ತನಿಖೆ ನಡೆಸುತ್ತಿದ್ದು, ಅಂತಹ ಅವಶ್ಯಕತೆ ಬಂದರೆ ಸಿಬಿಐಗೆ ಒಪ್ಪಿಸಲಾಗುವುದು" ಎಂದರು.
ಇನ್ನು "ಕರ್ನಾಟಕದಲ್ಲಿ ಗಣಿಗಾರಿಕೆಗೆ ಸ್ಪೋಟಕಗಳು ಬಳಸುವುದು ನಿಷೇಧಿಸಬೇಕಾಗಿದ್ದು, ಸ್ಪೋಟಕ ಸಾಮಗ್ರಿ ಖರೀದಿ, ಶೇಖರಣೆ ಬಗ್ಗೆ ಕೂಡ ಕಠಿಣ ನಿಯಮಗಳನ್ನು ರೂಪಿಸಲು ಸರ್ಕಾರ ಕ್ರಮವಹಿಸುತ್ತದೆ" ಎಂದು ಹೇಳಿದ್ದಾರೆ.