ಹೊಸಪೇಟೆ, ಜ.24 (DaijiworldNews/MB) : ''ರಾಜ್ಯದಲ್ಲಿ ಶೀಘ್ರವೇ ಲವ್ ಜಿಹಾದ್ ತಡೆ ಕಾನೂನು ಜಾರಿ ಮಾಡಲಾಗುವುದು. ಈ ಮೂಲಕ ಮಹಿಳೆಯರಿಗೆ ರಕ್ಷಣೆ ನೀಡಲಾಗುವುದು'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರವಿವಾರ ನಗರದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
''ಈಗಾಗಲೇ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದು, ಅದರಂತೆಯೇ ಲವ್ ಜಿಹಾದ್ ಕಾನೂನು ಕೂಡ ಜಾರಿಗೆ ತರಲಾಗುವುದು'' ಎಂದರು.
''ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನ ನಾವು ಒಪ್ಪಿದ್ದೇವೆ. ಇದು ಜಾತ್ಯಾತೀತ ದೇಶ. ಆದರೆ ಹಿಂದೂ ಸಂಸ್ಕೃತಿಯ ದೇಶ, ಹಿಂದೂ ದೇಶ'' ಎಂದು ಕೂಡಾ ಈ ವೇಳೆಯೇ ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, ''ಪಕ್ಷದಲ್ಲಿ ಅಸಮಾಧಾನಿತರು ಯಾರೂ ಇಲ್ಲ ಅಸಮಧಾನ ಹೊಂದಿದ್ದವರಲ್ಲಿ ನಾನೇ ಮಾತನಾಡಿ ಸರಿಪಡಿಸಿದ್ದೇನೆ'' ಎಂದಿದ್ದರು.