ನವದೆಹಲಿ,ಜ.24 (DaijiworldNews/HR): "ಕೇಂದ್ರ ಸರ್ಕಾರವು ದೇಶದ ಸಂಪತ್ತನ್ನು ಕಾರ್ಪೊರೇಟ್ ಕಂಪೆನಿಗಳಿಗೆ ವರ್ಗಾಯಿಸಿ, ರೈತರ ಹಕ್ಕುಗಳನ್ನು ಸಂಪೂರ್ಣವಾಗಿ ಕಸಿದುಕೊಂಡಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, " ದೇಶದ ಸಂಪೂರ್ಣ ಸಂಪತ್ತನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಹಸ್ತಾಂತರಿಸಿದೆ. ಆದರೆ ರೈತರು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿ ದೆಹಲಿಗೆ ಬಂದರೆ ನಿರ್ಬಂಧಿಸಲಾಗುತ್ತದೆ. ಇದು ಬಿಜೆಪಿ ಹಾಗೂ ಸೂಟು ಬೂಟುದಾರಿಗಳ 'ಜುಗಲ್ಬಂದಿ' ಆಗಿದೆ" ಎಂದರು.
ಇನ್ನು ನೂತನವಾಗಿ ಜಾರಿಗೊಳಿಸಿರುವ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತರು ದೆಹಲಿ ಗಡಿಯ ವಿವಿಧ ಭಾಗಗಳಲ್ಲಿ ನವೆಂಬರ್ 26 ರಿಂದಲೂ ಪ್ರತಿಭಟನೆ ನಡೆಸುತ್ತಿದ್ದು, ಈ ಸಂಬಂಧ ರೈತರು ಮತ್ತು ಸರ್ಕಾರದ ನಡುವೆ ಶುಕ್ರವಾರ ನಡೆದ 11ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ ಎನ್ನಲಾಗಿದೆ.