ನವದೆಹಲಿ, ಜ.24 (DaijiworldNews/MB) : ಭಾರತದ ಕೊರೊನಾ ವೈರಸ್ ಲಸಿಕೆ ಅಭಿಯಾನ ವಿಶ್ವದಲ್ಲೇ ಹೊಸ ದಾಖಲೆ ಬರೆದಿದ್ದು, ಕೇವಲ 6 ದಿನಗಳಲ್ಲಿ 10 ಲಕ್ಷ ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ.
ಜನವರಿ 16ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿದ್ದು 9 ದಿನಗಳಲ್ಲಿ ದೇಶದಲ್ಲಿ ಬರೋಬ್ಬರಿ 15,82,201 ಲಕ್ಷ ಜನರಿಗೆ ಲಸಿಕೆಯನ್ನು ನೀಡಲಾಗಿದೆ. ಲಸಿಕೆ ಆರಂಭವಾದ ದಿನ 2,07,229 ಮಂದಿಗೆ ಲಸಿಕೆ ನೀಡಲಾಗಿತ್ತು. ಬಳಿಕ ಈ ಸಂಖ್ಯೆಯಲ್ಲಿ ಮಹತ್ತರವಾದ ಏರಿಕೆ ಕಂಡಿದ್ದು ಆರು ದಿನದಲ್ಲೇ 10 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಈ ಮೂಲಕ ಭಾರತ ಅಮೇರಿಕಾವನ್ನೂ ಹಿಂದಿಕ್ಕಿದೆ. ಅಮೇರಿಕಾ ಮತ್ತು ಇಸ್ರೇಲ್ 10 ಲಕ್ಷ ಜನರಿಗೆ ಲಸಿಕೆ ನೀಡಲು 10 ದಿನ ತೆಗೆದುಕೊಂಡಿದ್ದವು.
ಇನ್ನು ಈ ಲಸಿಕೆ ತೆಗೆದುಕೊಂಡ 1,238 ಮಂದಿಯಲ್ಲಿ ಅಂದರೆ ಲಸಿಕೆ ಪಡೆದ ಶೇ 0.08 ರಷ್ಟು ಮಂದಿಯಲ್ಲಿ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ. 11 ಜನರು ಅಂದರೆ ಶೇ 0.0007 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರು ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಆದರೆ ಈ ಸಾವು ಲಸಿಕೆಯಿಂದ ನಡೆದಿರುವುದು ಅಲ್ಲ ಎಂದು ಕೂಡಾ ಸಚಿವಾಲಯ ತಿಳಿಸಿದೆ.