ತಿರುವನಂತಪುರಂ,ಜ.24 (DaijiworldNews/HR): ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದ್ದು, ಜನವರಿ 27 ಮತ್ತು 28ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.
ರಾಹುಲ್ ಗಾಂಧಿ ಕೇರಳದ ವಯನಾಡಿಗೆ ಎರಡು ದಿನಗಳ ಭೇಟಿ ನೀಡಲಿದ್ದು, ಅಲ್ಲಿಂದಲ್ಲೇ ಮತಯಾಚನೆ ಅಭಿಯಾನವನ್ನು ಆರಂಭಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಘಟಕ ತಿಳಿಸಿದೆ.
ಇನ್ನು ತಮಿಳುನಾಡಿನಲ್ಲಿ ಶನಿವಾರ ಚುನಾವಣಾ ಪ್ರಚಾರ ಕೈಗೊಂಡಿದ್ದು ಕೇಂದ್ರದ ರಾಹುಲ್ ವಾಗ್ದಾಳಿ ನಡೆಸಿದ್ದು, "ಪ್ರಸ್ತುತ ಭಾರತದಲ್ಲಿ ಒಂದು ಭಾಷೆ, ಒಂದು ಸಂಸ್ಕೃತಿ ಎಂಬ ಪರಿಕಲ್ಪನೆಯನ್ನು ಹೇರಲು ಪ್ರಯತ್ನಿಸಲಾಗುತ್ತಿದ್ದು, ಅದರ ವಿರುದ್ಧ ನಾವು ಹೋರಾಟ ನಡೆಸಿದ್ದೇವೆ. ತಮಿಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಜನರ ಬಗ್ಗೆ ಮೋದಿಗೆ ಗೌರವವಿಲ್ಲ. ತಮಿಳು ಜನರು, ಭಾಷೆ ಮತ್ತು ಸಂಸ್ಕೃತಿ ಅವರ ಪರಿಕಲ್ಪನೆಗೆ ಅಧೀನವಾಗಿರಬೇಕೆಂದು ಮೋದಿ ಬಯಸುತ್ತಾರೆ. ತಮಿಳು, ಹಿಂದಿ, ಬಂಗಾಳಿ, ಇಂಗ್ಲಿಷ್ ಸೇರಿದಂತೆ ಎಲ್ಲ ಭಾಷೆಗಳಿಗೆ ಈ ದೇಶದಲ್ಲಿ ಜಾಗವಿದೆ ಎಂಬುದಾಗಿ ನಾವು ನಂಬಿದ್ದೇವೆ" ಎಂದು ಹೇಳಿದ್ದಾರೆ.