ಹೊಸಪೇಟೆ, ಜ.24 (DaijiworldNews/MB) : ''ಪಕ್ಷದಲ್ಲಿ ಅಸಮಾಧಾನಿತರು ಯಾರೂ ಇಲ್ಲ'' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರವಿವಾರ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗಿಯಾಗಲು ಆಗಮಿಸಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ನಮ್ಮ ಪಕ್ಷದಲ್ಲಿ ಯಾರಿಗೂ ಅಸಮಧಾನವಿಲ್ಲ. ಅಸಮಧಾನ ಹೊಂದಿದ್ದವರಲ್ಲಿ ನಾನೇ ಮಾತನಾಡಿ ಸರಿಪಡಿಸಿದ್ದೇನೆ'' ಎಂದರು.
''ನಾನು ಕೂಡಾ ರೆಸಾರ್ಟ್ಗೆ ಹೋಗುತ್ತೇನೆ, ಅದರಲ್ಲಿ ತಪ್ಪೇನಿದೆ'' ಎಂದು ಪ್ರಶ್ನಿಸಿದ ಅವರು, ''ನಾನು ಕೂಡಾ ನಿನ್ನೆ ಹೊಟೇಲ್ನಲ್ಲೇ ಉಳಿದುಕೊಂಡಿದ್ದೆ. ಇಂದು ಅತಿಥಿ ಗೃಹದಲ್ಲಿ ವಾಸವಿದ್ದೇನೆ. ಯಾರು ಎಲ್ಲಿ ಉಳಿದುಕೊಂಡರು ಎಂದು ನೋಡಿ ಬೇರೆ ಅರ್ಥ ಕಲ್ಪಿಸುವುದು ಬೇಡ'' ಎಂದು ಹೇಳಿದರು.
ಇನ್ನು ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ''ಬಿಜೆಪಿ ಅತ್ಯಧಿಕ ಸ್ಥಾನಗಳಲ್ಲಿ ಜಯ ಸಾಧಿಸಿದೆ. ಆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಕಾಂಗ್ರೆಸ್ನವರು ಆಮಿಷವೊಡ್ಡಿ ಅವರೆಡೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ'' ಎಂದು ಆರೋಪಿಸಿದರು.
''ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸದಾ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ದ ಹೇಳಿಕೆ ನೀಡುತ್ತಿರುವುದರ ಬಗ್ಗೆ ಪಕ್ಷದ ಶಿಸ್ತು ಸಮಿತಿ ಸೂಕ್ತ ಕ್ರಮಕೈಗೊಳ್ಳಿದೆ'' ಎಂದು ತಿಳಿಸಿದರು.