ಚಾಮರಾಜನಗರ, ಜ.24 (DaijiworldNews/MB) : ''ಖಾತೆ ಹಂಚಿಕೆ ಜಾತಿ ಆಧಾರಿತವಾಗಿ ಆಗಿಲ್ಲ. ಆದರೆ ಯಾರೋ ಈ ವದಂತಿಗಳನ್ನು ಹಬ್ಬಿಸಿದ್ದಾರೆ'' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಖಾತೆ ಹಂಚಿಕೆ ಸಂದರ್ಭದಲ್ಲಿ ಒಕ್ಕಲಿಗರ ಕಡೆಗಣನೆ ಮಾಡಿಲ್ಲ. ಅತ್ಯಂತ ದೊಡ್ಡದಾದ ಸಹಕಾರ, ಎಪಿಎಂಸಿ ಖಾತೆಯನ್ನು ಎಸ್.ಟಿ.ಸೋಮಶೇಖರ್ ಅವರಿಗೆ ನೀಡಲಾಗಿದೆ'' ಎಂದರು.
ಹಾಗೆಯೇ, ''ಸುಧಾಕರ್ ಅವರಿಗೆ ಆರೋಗ್ಯ ಖಾತೆ, ಅಶೋಕ ಅವರಿಗೆ ಕಂದಾಯ ಖಾತೆ, ಸಿ.ಪಿ.ಯೋಗೇಶ್ವರ್ ಅವರಿಗೆ ಸಣ್ಣ ನೀರಾವರಿ ಖಾತೆ, ನಾರಾಯಣ ಗೌಡ ಅವರಿಗೆ ಕ್ರೀಡಾ ಮತ್ತು ಯೋಜನಾ ಖಾತೆ, ಗೋಪಾಲಯ್ಯಗೆ ಅಬಕಾರಿ ಖಾತೆ ನೀಡಲಾಗಿದೆ'' ಎಂದು ವಿವರಿಸಿದರು.
ಇನ್ನು ಈ ಸಂದರ್ಭದಲ್ಲೇ, ''ಮುಂಬೈ ಟೀಂನ ಲೀಡರ್ ಆಗಿದ್ದ ನಾನು ಈಗ ಒಬ್ಬಂಟಿಯಾಗಿದ್ದೇನೆ'' ಎಂಬ ಅಡಗೂರು ಎಚ್.ವಿಶ್ವನಾಥ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ''ನಾವೆಲ್ಲ ಇರುವಾಗ ಅವರು ಒಬ್ಬಂಟಿಯಲ್ಲ. ಇಲ್ಲಿ ಯಾರು ಯಾರಿಗೂ ಲೀಡರ್ ಆಗಲಾಗದು, ವಿಶ್ವನಾಥ್ ಅವರಿಗೆ ಅವರೇ ಲೀಡರ್'' ಎಂದರು.
''ಕಾನೂನು ತೊಡಕು ಇದ್ದ ಕಾರಣ ಅವರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಾಗಿಲ್ಲ'' ಎಂದು ಹೇಳಿದರು.