ಕೋಲ್ಕತಾ, ಜ.24 (DaijiworldNews/HR): "ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ನಾಶಮಾಡಿದೆ" ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.
ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ಕೋಲ್ಕತಾದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಆ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾಷಣ ಮಾಡಲು ಆಹ್ವಾನಿಸಲಾಗಿದ್ದು ಅವರ ಭಾಷಣಕ್ಕೂ ಮುನ್ನ 'ಜೈ ಶ್ರೀರಾಮ್' ಎಂಬ ಘೋಷಣೆ ಕೂಗಲಾಯಿತು. ಇದಕ್ಕೆ ಆಕ್ರೋಶಗೊಂಡ ಮಮತಾ, "ಇದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಇದೊಂದು ಸರ್ಕಾರಿ ಕಾರ್ಯಕ್ರಮ. ಆಹ್ವಾನಿಸುವುದು ಮತ್ತು ಅವಮಾನಿಸುವುದು ಯಾರಿಗೂ ಇಷ್ಟವಾಗುವುದಿಲ್ಲ. ನಾನು ಮಾತನಾಡುವುದಿಲ್ಲ" ಜೈ ಬಂಗಾಳ, ಜೈ ಹಿಂದ್ ಎಂದು ತಮ್ಮ ಭಾಷಣವನ್ನು ನಿಲ್ಲಿಸಿದ್ದರು.
ಇನ್ನು ಈ ಘಟನೆಯ ಬಗ್ಗೆ ಮಾತನಾಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, "ಬಹು ನಂಬಿಕೆಗಳ ಮೇಲೆ ರಚನೆಗೊಂಡಿರುವ ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ಮೋದಿ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ನಾಶಮಾಡಿದೆ. ಅದೊಂದು ಸರ್ಕಾರಿ ಕಾರ್ಯಕ್ರಮವಾಗಿದೆ. ಅಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗುವುದು ಸರಿಯಲ್ಲ. ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಜಾಗವಿಲ್ಲ" ಎಂದು ಹೇಳಿದ್ದಾರೆ.