ಕಾಸರಗೋಡು, ಜ. 23 (DaijiworldNews/SM): ಮತಗಟ್ಟೆ ಅಧಿಕಾರಿಗೆ ಬೆದರಿಕೆಯೊಡ್ಡಿದ ಆರೋಪಕ್ಕೆ ಸಿಲುಕಿರುವ ಉದುಮ ಶಾಸಕ ಕೆ.ಕು೦ಞ ರಾಮನ್ ವಿರುದ್ಧ ಕೇಸು ದಾಖಲಿಸಬೇಕೆಂದು ಒತ್ತಾಯಿಸಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿತ್ತು.
ಅಲ್ಲದೆ, ಕಲ್ಯೊಟ್ ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತ ದೀಪು ಕೃಷ್ಣರವರ ಮನೆ ಮೇಲೆ ಬಾಂಬೆಸೆದ ಪ್ರಕರಣದ ಆರೋಪಿಗಳನ್ನು ಒಂದೂವರೆ ವರ್ಷ ಕಳೆದರೂ ಬಂಧಿಸದಿರುವುದನ್ನು ಪ್ರತಿಭಟಿಸಿ ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೇಕಲ ಪೊಲೀಸ್ ಠಾಣೆ ಗೆ ಮುತ್ತಿಗೆ ಹಾಕಿ ನಡೆದ ಪ್ರತಿಭಟನಾ ಜಾಥಾ ಹಿಂಸಾ ರೂಪಕ್ಕೆ ತಿರುಗಿದ್ದು , ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು.
ಉದುಮ ಗ್ರಾಮ ಪಂಚಾಯತ್ ಕಚೇರಿ ಬಳಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಪೊಲೀಸ್ ಠಾಣಾ ಮುಂಭಾಗದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ದೂಡಿ ಹಾಕಿ ಮುನ್ನಗ್ಗೆಲೆತ್ನಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜೋಮೋನ್ ಜೋಸ್ ಪ್ರತಿಭಟನೆಯನ್ನು ಉದ್ಘಾಟಿಸಿದರು.
ಜಿಲ್ಲಾಧ್ಯಕ್ಷ ಬಿ. ಪಿ. ಪ್ರದೀಪ್ ಕುಮಾರ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿ. ಆರ್. ವಿದ್ಯಾಸಾಗರ್ ಮೊದಲಾದವರು ಮಾತನಾಡಿದರು.