ನವದೆಹಲಿ, ಜ.23 (DaijiworldNews/MB) : 2016ರಲ್ಲಿ ಏಮ್ಸ್ ನ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಆರೋಪ ಹೊತ್ತಿರುವ ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿಯನ್ನು ಅಪರಾಧಿ ಎಂದು ಘೋಷಿಸಿದ್ದ ದೆಹಲಿ ಕೋರ್ಟ್ ಶನಿವಾರ ಭಾರ್ತಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಈ ಬಗ್ಗೆ ಆದೇಶ ಹೊರಡಿಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ, ಆರೋಪಿ ಸೋಮನಾಥ್ ಭಾರ್ತಿ ವಿರುದ್ಧ ಆರೋಪಕ್ಕೆ ಸಂಬಂಧಪಟ್ಟಂತೆ ಐಪಿಸಿ ಸೆಕ್ಷನ್ 149ರಡಿ ಹಾಗೂ 1984ರ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯ ಸೆಕ್ಷನ್ 3ರಡಿ ಸೇರಿದಂತೆ ಹಲವು ಕಾಯ್ದೆಗಳಡಿಯಲ್ಲಿ ಆರೋಪ ಸಾಬೀತಾಗಿದೆ. ಸೋಮನಾಥ್ ಭಾರ್ತಿ ಅಪರಾಧಿ ಎಂದು ಹೇಳಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಕೋರ್ಟ್ ಇತರ ಆರೋಪಿಗಳಾದ ಜಗತ್ ಸೈನಿ, ದಲೀಪ್ ಜ್ಹಾ, ಸಂದೀಪ್ ಅಲಿಯಾಸ್ ಸೋನು ಮತ್ತು ರಾಕೇಶ್ ಪಾಂಡೆ ಅವರನ್ನು ನ್ಯಾಯಾಲಯವು ಆರೋಪಮುಕ್ತಗೊಳಿಸಿದೆ.
ಶಾಸಕ ಭಾರ್ತಿ ಮತ್ತು ಅವರ 300 ಬೆಂಬಲಿಗರು ಏಮ್ಸ್ ನ ಭದ್ರತಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಸರ್ಕಾರದ ಆಸ್ತಿಗೆ ಹಾನಿ ಮಾಡಲು ಪ್ರಚೋದನೆ ನೀಡಿದ್ದಾರೆ ಎಂದು ಸೆಪ್ಟೆಂಬರ್ 9, 2016ರಲ್ಲಿ ಏಮ್ಸ್ನ ಮುಖ್ಯ ಭದ್ರತಾ ಅಧಿಕಾರಿ ಆರ್ ಎಸ್ ರಾವತ್ ದೆಹಲಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದರು.