ಬೆಂಗಳೂರು, ಜ.23 (DaijiworldNews/MB) : ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಟೀಲ್, ''ಕೇಂದ್ರ ನಾಯಕರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಎಲ್ಲ ಗೊಂದಲಗಳು ಒಂದೆರಡು ದಿನದಲ್ಲಿ ಸರಿಯಾಗಲಿದೆ'' ಎಂದು ಹೇಳಿದರು.
ಇನ್ನು ಈ ವೇಳೆ ಅಸಮಧಾನಿತ ಶಾಸಕರು ದೆಹಲಿಗೆ ತೆರಳಿರುವ ಬಗ್ಗೆ ಮಾತನಾಡಿದ ಅವರು, ''ಅವರಷ್ಟಕ್ಕೇ ಅವರು ದೆಹಲಿಗೆ ಹೋಗುತ್ತಾರೆ. ಯಾವುದೋ ಕಾರಣದಲ್ಲಿ ಹೋಗಿರಬಹುದು'' ಎಂದು ಹೇಳಿದರು. ''ಸಂಪುಟ ವಿಸ್ತರಣೆ ಸಂದರ್ಭ ಅಸಮಾಧಾನ ಆಗುವುದು ಸಹಜ'' ಎಂದು ಕೂಡಾ ಹೇಳಿದರು.
''ಯಾರಿಗಾದರೂ ಅವರ ನೋವು ವ್ಯಕ್ತಪಡಿಸುವ ಸ್ವಾತಂತ್ಯ್ರವಿದೆ. ನಾನು ಅಸಮಾಧಾನಿತರನ್ನು ಕರೆದು ಮಾತನಾಡುತ್ತೇನೆ. ನನ್ನ ಜವಾಬ್ದಾರಿ ಅದಾಗಿದ್ದು, ಅವರಿಗೆ ಏನಾದರೂ ಬೇಸರ ಆಗಿದ್ದರೆ, ಮಾತನಾಡಿ ಸರಿಪಡಿಸಲಾಗುವುದು'' ಎಂದರು.
''ಖಾತೆ ಹಂಚಿಕೆ, ಮಂತ್ರಿ ಮಂಡಲ ರಚನೆ ಸಿಎಂ ವಿವೇಚನೆಗೆ ಬಿಟ್ಟಿರುವುದು. ಎಲ್ಲ ಗೊಂದಲವನ್ನು ಈಗಾಗಲೇ ಮುಖ್ಯಮಂತ್ರಿ ಸರಿಪಡಿಸಿದ್ದಾರೆ. ಬೇರೆ ಯಾವ ಸಮಸ್ಯೆ ಪಕ್ಷದೊಳಗೆ ಇದ್ದರೂ ಸಿಎಂ ಸರಿಪಡಿಸುತ್ತಾರೆ'' ಎಂದು ಹೇಳಿದರು.