ರಾಂಚಿ,ಜ.23 (DaijiworldNews/HR): ಮೇವು ಹಗರಣದಲ್ಲಿ ಜೈಲುಪಾಲಾಗಿದ್ದು, ಅನಾರೋಗ್ಯಗೊಂಡಿದ್ದ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸದ್ಯ ರಾಂಚಿಯ ಆರ್ಐಎಂಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಆರೋಗ್ಯ ಮತ್ತಷ್ಟು ಹದಗೆಟ್ಟಿರುವ ಹಿನ್ನಲೆಯಲ್ಲಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಲು ಅವರಿಗೆ ಕಳೆದ ಎರಡು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ಆರ್ಐಎಂಸ್ ಆಸ್ಪತ್ರೆಯ ನಿರ್ದೇಶಕ ಡಾ. ಕಾಮೇಶ್ವರ್ ಪ್ರಸಾದ್ ತಿಳಿಸಿದ್ದಾರೆ.
ಇನ್ನು ಲಾಲು ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಬೇಕಿದ್ದರೆ ಜೈಲು ಅಧಿಕಾರಿಗಳು ಸಿಬಿಐ ಕೋರ್ಟ್ನಿಂದ ಅನುಮತಿ ಪಡೆಯಬೇಕಿದೆ ಎಂದೂ ಅವರು ತಿಳಿಸಿದ್ದಾರೆ.
ಲಾಲು ಆರೋಗ್ಯ ಸ್ಥಿತಿ ಹದಗೆಟ್ಟಿರುವ ಕಾರಣ ಅವರ ಪತ್ನಿ ,ಮಗಳು, ಪುತ್ರರು ಶುಕ್ರವಾರ ರಾತ್ರಿ ವಿಶೇಷ ವಿಮಾನದಲ್ಲಿ ರಾಂಚಿಗೆ ತೆರಳಿ ಲಾಲು ಅವರನ್ನು ಭೇಟಿಯಾಗಿದ್ದರು.