ನವದೆಹಲಿ, ಜ.23 (DaijiworldNews/MB) : ''ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ದೇಶದ ಯುವಕರಿಗೆ ಆದರ್ಶಪ್ರಾಯವಾಗಿದೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಎರಡು ದಿನಗಳ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಪ್ರವಾಸದಲ್ಲಿರುವ ಗೃಹ ಸಚಿವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವಾದ ಶನಿವಾರದಂದು ಗುವಾಹಟಿಯಲ್ಲಿರುವ ಬೋಸ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.
''ನೇತಾಜಿ ಅವರದ್ದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಬಲವನ್ನು ನೀಡಿದ ನಾಯಕತ್ವ. ಅವರಲ್ಲಿ ಅಪಾರ ಧೈರ್ಯ ಮತ್ತು ಅನನ್ಯ ಸಂಕಲ್ಪವಿತ್ತು'' ಎಂದರು. ''ಸುಭಾಷ್ ಅವರ ವ್ಯಕ್ತಿತ್ವವು ಎಲ್ಲ ಜನರ ಹೃದಯದಲ್ಲಿ ಸ್ವಾತಂತ್ರ್ಯದ ಉಬ್ಬರವಿಳಿತವನ್ನು ಸೃಷ್ಟಿಸುತ್ತದೆ'' ಎಂದು ಹೇಳಿದರು.