ಬಾಗಲಕೋಟೆ,ಜ.23 (DaijiworldNews/HR): "ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಪೋಷಕರ ಮತ್ತು ಖಾಸಗಿ ಶಾಲೆ ಶಿಕ್ಷಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಶೀಘ್ರವಾಗಿ ಸೂತ್ರವೊಂದನ್ನು ರೂಪಿಸಲಾಗುವುದು" ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೊನಾದಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪೋಷಕರಿಗೆ ಖಾಸಗಿ ಶಾಲೆಗಳಿಗೆ ಸೇರಿಸಿರುವ ಮಕ್ಕಳ ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಶುಲ್ಕ ಕಡಿಮೆ ಮಾಡಿಸುವಂತೆ ಇಲಾಖೆಗೆ ಅಹವಾಲು ಸಲ್ಲಿಸಿದ್ದಾರೆ. ಇನ್ನೊಂದು ಕಡೆ ಖಾಸಗಿ ಶಾಲೆ ಆಡಳಿತ ಮಂಡಳಿಗಳಿಗೆ ಶಿಕ್ಷಕರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಕೆಲವು ಕಡೆ ಸಂಬಳ ಸಿಗದೇ ಶಿಕ್ಷಕರು ತರಕಾರಿ ಮಾರಾಟ ಮಾಡಿ ಬದುಕುತ್ತಿದ್ದಾರೆ" ಎಂದರು.
ಇನ್ನು "ಈ ಎಲ್ಲಾ ಕಾರಣಗಳನ್ನು ಮನಗಂಡು ಇಲಾಖೆಯ ಆಯುಕ್ತರು ಇತ್ತೀಚೆಗೆ ಪೋಷಕರು ಹಾಗೂ ಖಾಸಗಿ ಶಾಲೆ ಪ್ರತಿನಿಧಿಗಳ ಸಭೆ ನಡೆಸಿ ಅವರ ಅಭಿಪ್ರಾಯ ಆಲಿಸಿ ಮೂರು ಸೂತ್ರಗಳನ್ನು ಸರ್ಕಾರದ ಮುಂದೆ ಇಟ್ಟಿದ್ದು, ಅವುಗಳನ್ನು ಪರಿಶೀಲಿಸಿ ಶಿಕ್ಷಣ ಹಾಗೂ ಪದವೀಧರ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಪೋಷಕರಿಗೆ ಭಾರ ಆಗದಂತೆ ಖಾಸಗಿ ಶಾಲಾ ಶಿಕ್ಷಕರಿಗೆ ತೊಂದರೆ ಆಗದಂತೆ ಶೀಘ್ರ ಅಂತಿಮ ಸೂತ್ರ ಜಾರಿಗೊಳಿಸಲಾಗುವುದು" ಎಂದು ಹೇಳಿದ್ದಾರೆ.