ಶ್ರೀನಗರ, ಜ.23 (DaijiworldNews/MB) : ''ಜಮ್ಮು ಮತ್ತು ಕಾಶ್ಮೀರವನ್ನು ಬಿಜೆಪಿಯು ತನ್ನ ರಾಜಕೀಯ ಪ್ರಯೋಗಾಲಯವನ್ನಾಗಿ ಮಾಡಿಕೊಂಡಿದೆ'' ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ''ಸಂವಿಧಾನವನ್ನು ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ನಾಶಪಡಿಸಿದೆ'' ಎಂದು ಹೇಳಿದ ಅವರು, ''ಈ ಹಿಂದೆ ಬಿಜೆಪಿ ಜತೆ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಮೈತ್ರಿ ಮಾಡಿಕೊಂಡಿರುವುದು ತಂದೆಯ ಯೋಚನೆಯಾಗಿತ್ತು. ಆದರೆ ಇನ್ನೆಂದೂ ಆ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
''ನನ್ನ ತಂದೆ (ಮುಫ್ತಿ ಮೊಹ್ಮದ್ ಸಯೀದ್) ಅವರು ವಿಸ್ತೃತ ಒಳಿತಿಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿದ್ದರು. ನಾನು ಅದನ್ನು ಗೌರವಿಸುತ್ತೇನೆ. ಆದರೆ ಅದು ಅಲ್ಲಿಗೆ ಮುಗಿದ ಅಧ್ಯಾಯ. ನನ್ನ ತಂದೆ ಕೇವಲ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತ್ರವಲ್ಲದೇ ದೇಶದ ಬಗ್ಗೆಯೂ ರಾಜಕೀಯ ದೂರದೃಷ್ಟಿ ಹೊಂದಿದ್ದರು'' ಎಂದು ಹೇಳಿದ್ದಾರೆ.
''ಕಾಶ್ಮೀರ ಸಮಸ್ಯೆ ಶಾಂತಿಯುತವಾಗಿ ಅಂತ್ಯ ಕಾಣಬೇಕೆಂಬ ಉದ್ದೇಶದಿಂದ ತಂದೆಯವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ನಾನು ಬಿಜೆಪಿಯ ಅಭಿಮಾನಿ ಅಲ್ಲದಿದ್ದರೂ, ಅವರ ನಿರ್ಧಾರದಿಂದ ಹೊರ ಬರುವಂತಿರಲಿಲ್ಲ. ಆದರೆ ಬಿಜೆಪಿ ಪ್ರತಿಯೊಂದನ್ನೂ ಕ್ಷುಲ್ಲಕ ಚುನಾವಣಾ ಲಾಭದ ದೃಷ್ಟಿಯಿಂದಷ್ಟೇ ನೋಡುತ್ತದೆ'' ಎಂದು ದೂರಿದ್ದಾರೆ.
''ಬಿಜೆಪಿಗೆ ಸಮಸ್ಯೆ ಬಗೆಹರಿಸುವ ಉದ್ದೇಶವಿಲ್ಲ ಇದರ ಬದಲಾಗಿ, ಕತ್ತಲೆಗೆ, ವಿಭಜನೆಗೆ ಮತ್ತು ಧರ್ಮಾಂಧತೆಗೆ ದೂಡುವ ಹುನ್ನಾರವಿದೆ. ದುರಾದೃಷ್ಟವಶಾತ್ ಜಮ್ಮು ಮತ್ತು ಕಾಶ್ಮೀರ ಬಿಜೆಪಿಯ ರಾಜಕೀಯ ಪ್ರಯೋಗಾಲಯವಾಗಿದೆ'' ಎಂದಿದ್ದಾರೆ.