ಮೈಸೂರು, ಜ.23 (DaijiworldNews/MB) : ''ಅಕ್ರಮ ಗಣಿಗಾರಿಕೆ ತಡೆಗಟ್ಟಲು ಕ್ರಮಕೈಗೊಳ್ಳುವಂತೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ'' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಶನಿವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, ''ಶಿವಮೊಗ್ಗದಲ್ಲಿ ಆದ ಘಟನೆ ಮನಸ್ಸಿಗೆ ಬಹಳ ಬೇಸರವನ್ನು ಉಂಟು ಮಾಡಿದೆ. ಸ್ಥಳಕ್ಕೆ ನಾನು ಭೇಟಿ ನೀಡಲಿದ್ದೇನೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ವಿತರಿಸಲಾಗುವುದು'' ಎಂದು ಹೇಳಿದರು.
''ರಾಜ್ಯದಲ್ಲಿ ಗಣಿಗಾರಿಕೆಗೂ ಕೂಡಾ ಅವಕಾಶ ನೀಡುವುದು ಅಗತ್ಯ. ಆದರೆ ಅಕ್ರಮ ಗಣಿಗಾರಿಕೆ ನಡೆಸುವುದನ್ನು ನೋಡಿಕೊಂಡು ಸುಮ್ಮನಿರಲು ಆಗಲ್ಲ'' ಎಂದು ತಿಳಿಸಿದರು.
ಇನ್ನು ಬಜೆಟ್ ಬಗ್ಗೆ ಮಾತನಾಡಿದ ಅವರು, ''ಈ ಬಾರಿ ಬಜೆಟ್ ಗಾತ್ರ ಕಿರಿದಾಗಲಿದೆ, ಕೊರೊನಾ ಕಾರಣದಿಂದಾಗಿ ಅದು ಅನಿವಾರ್ಯವಾಗಿದೆ. ಪರಿಸ್ಥಿತಿಯ ಬಗ್ಗೆ ಅವಲೋಕನೆ ಮಾಡಿ ಬಜೆಟ್ ಹಣ ವಿಂಗಡಿಸಲಾಗುವುದು'' ಎಂದು ಹೇಳಿದರು.
ಹಾಗೆಯೇ , ''ರಾಜ್ಯದಲ್ಲಿ ಕೊರೊನಾ ಸಮಸ್ಯೆ ಶೇ 90ರಷ್ಟು ಕಡಿಮೆಯಾಗಿದ್ದು, ಕೊರೊನಾ ನಿರ್ವಹಣೆಗೆ ಬೇಕಾದ ಹಣಕಾಸು ನೆರವು ನೀಡಲಾಗುತ್ತದೆ'' ಎಂದು ಕೂಡಾ ತಿಳಿಸಿದರು.