ನವದೆಹಲಿ, ಜ.23 (DaijiworldNews/MB) : ಕೊರೊನಾ ಕಾರಣದಿಂದಾಗಿ ಈ ಬಾರಿಯ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಹಲವು ಕಾರ್ಯಕ್ರಮಗಳನ್ನು ಕೈ ಬಿಡಲಾಗಿದ್ದು, ರಾಜಪಥ್ನಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಬೈಕ್ ಸ್ಟಂಟ್ ಈ ಬಾರಿ ನಡೆಯಲ್ಲ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶೌರ್ಯ ಪ್ರಶಸ್ತಿಗಳ ಪ್ರದಾನವೂ ಈ ಬಾರಿ ಸಾರ್ವಜನಿಕವಾಗಿ ನಡೆಯುವುದಿಲ್ಲ. ಅಷ್ಟೇ ಅಲ್ಲದೇ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳೂ ಭಾಗಿಯಾಗುತ್ತಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರತಿ ವರ್ಷ ಇದು 1.25 ಲಕ್ಷ ಜನರು ಈ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಆದರೆ ಈ ವರ್ಷ ವೀಕ್ಷಕರ ಸಂಖ್ಯೆಯನ್ನು 25,000 ಕ್ಕೆ ಇಳಿಸಲಾಗಿದೆ. ಗಣರಾಜ್ಯೋತ್ಸವದ ಮುಖ್ಯ ಆಕರ್ಷಣೆಯಾಗಿರುವ ಸೇನೆ ಅಥವಾ ಅರೆಸೇನಾಪಡೆ ಸಿಬ್ಬಂದಿಗಳು ನಡೆಸುತ್ತಿದ್ದ ಮೋಟಾರ್ ಸೈಕಲ್ ಸ್ಟಂಟ್ಗಳನ್ನು ಈ ಬಾರಿ ಸ್ಥಗಿತಗೊಳಿಸಲಾಗಿದೆ. ಮಾರ್ಚಿಂಗ್ ತಂಡಗಳನ್ನೂ 144 ರಿಂದ 96 ಕ್ಕೆ ಇಳಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಬಾರಿ ಮಾಧ್ಯಮ ಪ್ರತಿನಿಧಿಗಳಿಗೂ ನಿರ್ಬಂಧ ಹೇರಲಾಗಿದೆ. ಬೇರೆ ಬೇರೆ ರಾಜ್ಯವನ್ನು ಪ್ರತಿನಿಧಿಸುವ ಟ್ಯಾಬ್ಲೂ ತಂಡದವರು, ಸರ್ಕಾರಿ ಅಧಿಕಾರಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯವಾಗಿದೆ. ಇನ್ನು ಬಾಂಗ್ಲಾದೇಶ 50 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವ ಕಾರಣದಿಂದಾಗಿ ಭಾರತದ ಗಣರಾಜ್ಯೋತ್ಸವ ದಿನಾಚರಣೆಯಂದು ಬಾಂಗ್ಲಾದೇಶದ ಸೇನೆಯ ಬ್ಯಾಂಡ್ ಪರೇಡ್ನಲ್ಲಿ ಭಾಗಿಯಾಗಲಿದೆ.