ನವದೆಹಲಿ, ಜ.23 (DaijiworldNews/MB) : ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ಗಣರಾಜ್ಯೋತ್ಸವದ ದಿನದ ಟ್ರ್ಯಾಕ್ಟರ್ ರ್ಯಾಲಿಗೆ ಅಡ್ಡಿಯುಂಟುಮಾಡುವ ಸಂಚು ಹೂಡಿದ್ದ ವ್ಯಕ್ತಿಯೊಬ್ಬನನ್ನು ರೈತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯು ತಾನು ಪೊಲೀಸ್ ಸಮವಸ್ತ್ರ ಧರಿಸಿ ನಾಲ್ವರು ರೈತ ಮುಖಂಡರ ಮೇಲೆ ಗುಂಡಿಕ್ಕಿ ರ್ಯಾಲಿಗೆ ಅಡ್ಡಿಯುಂಟು ಮಾಡುವ ಪಿತೂರಿ ನಡೆಸಿದ್ದಾಗಿ ಹೇಳಿದ್ದು ಮಾತ್ರವಲ್ಲದೇ, ಇದಕ್ಕಾಗಿ ಹರಿಯಾಣದ ರಾಯ್ ಪೊಲೀಸ್ ಠಾಣೆಯ ಠಾಣಾಧಿಕಾರಿ ನಮಗೆ ತರಬೇತಿ ನೀಡಿದ್ದಾರೆ ಎಂದು ಕೂಡಾ ಹೇಳಿದ್ದಾನೆ ಎಂದು ವರದಿಯಾಗಿದೆ.
ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ರೈತರು ದೆಹಲಿಯ ವಿವಿಧ ಗಡಿಗಳಲ್ಲಿ, ಮಳೆ, ಚಳಿ, ಗಾಳಿ ಲೆಕ್ಕಿಸದೆ, ಕೇಂದ್ರದ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಲ್ಲಿದ್ದಾರೆ. ರೈತರು ಹಾಗೂ ಸರ್ಕಾರದ ನಡುವೆ 11 ಸುತ್ತಿನ ಮಾತುಕತೆ ನಡೆದಿದ್ದು ಎಲ್ಲವೂ ವಿಫಲವಾಗಿದೆ. ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ನಿರ್ಧರಿಸಿರುವ ರೈತರು, ಜನವರಿ 26ರ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್ ನಡೆಸಲಿದ್ದಾರೆ. ಈ ದಿನದಂದೇ ದೇಶದಾದ್ಯಂತ ಅಲ್ಲಲ್ಲಿ ಪರೇಡ್, ಕಾರ್ಯಕ್ರಮಗಳು ನಡೆಯಲಿದೆ.