ಚಂಡೀಘಡ, ಜ.23 (DaijiworldNews/MB) : ದೆಹಲಿಯ ವಿವಿಧ ಗಡಿಯಗಳಲ್ಲಿ ರೈತರು ಕಳೆದ 50 ದಿನಗಳಿಗಿಂತಲೂ ಅಧಿಕ ಕಾಲದಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಸಾವನ್ನಪ್ಪಿದ್ದ ರೈತರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
''ದೆಹಲಿಯಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮಗಾಗಿ ಅಲ್ಲ ಬದಲಾಗಿ ತಮ್ಮ ಮಕ್ಕಳು, ಮೊಮ್ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂದು ಅವರು ಬೀದಿಗಿಳಿದಿದ್ದಾರೆ. ಈವರೆಗೂ 76 ರೈತರು ಮೃತಪಟ್ಟಿದ್ದಾರೆ. ಅವರೆಲ್ಲರ ಕುಟುಂಬ ಸದಸ್ಯರಿಗೆ ಹೆಚ್ಚುವರಿಯಾಗಿ 5 ಲಕ್ಷ ಪರಿಹಾರ ನೀಡಲಾಗುವುದು. ಹಾಗೆಯೇ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು'' ಎಂದು ಫೇಸ್ಬುಕ್ ಲೈವ್ ಮೂಲಕ ತಿಳಿಸಿದ್ದಾರೆ.
''ನಮ್ಮ ವಿಶ್ವಾಸ ಪಡೆಯದೆಯೇ ಏಕಾಏಕಿ ಕೇಂದ್ರ ಸರ್ಕಾರ ಜಾರಿಗೆ ತಂದ ಈ ಕೃಷಿ ಕಾಯ್ದೆಗಳ ರದ್ದತಿಗೆ ಕೇಂದ್ರ ಸರ್ಕಾರದ ಮನವೊಲಿಸಲೆಂದೇ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ'' ಎಂದು ಕೂಡಾ ಈ ವೇಳೆಯೇ ಹೇಳಿದರು.
ಕೇಂದ್ರದ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಹಲವು ಹಂತದ ಮಾತುಕತೆ ವಿಫಲವಾಗಿದೆ. ಜನವರಿ 26 ರಂದು ರೈತರು ಟ್ರಾಕ್ಟರ್ ರ್ಯಾಲಿ ನಡೆಸಲಿದ್ದು ಈ ದಿನದಂದೇ ದೇಶದ ವಿವಿಧ ಭಾಗಗಳಲ್ಲಿ ಪರೇಡ್ ನಡೆಯಲಿದೆ.