ಬೆಂಗಳೂರು,ಜ.22 (DaijiworldNews/HR): ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ಬಳಿಕ ಗೋಹತ್ಯೆ ಮಾಡಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ವಿಜಯಪುರ ಜಿಲ್ಲೆಯ ಕೂಡಗಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ" ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ವ್ಯಕ್ತಿಯೊಬ್ಬ ಕೂಡಗಿ ಗ್ರಾಮದ ಬಳಿಯ ರೈಲ್ವೆ ಹಳಿ ಹತ್ತಿರದ ಶೆಡ್ವೊಂದರಲ್ಲಿ ಎತ್ತೊಂದರ ಮಾಂಸ ಮಾರಾಟದಲ್ಲಿ ತೊಡಗಿದ್ದ ವೇಳೆ ಕೂಡಗಿ ಪಿಎಸ್ಐ ರೇಣುಕಾ ಜಕನೂರು ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಅವನೊಂದಿಗಿದ್ದ ಇನ್ನೊಂದು ಎತ್ತನ್ನು ರಕ್ಷಿಸಿ ಯಲಗೂರು ಗೋಶಾಲೆಗೆ ನೀಡಿದ್ದಾರೆ.
ಬಂಧಿತ ಆರೋಪಿಯನ್ನು ಸಿಖಂದರ್ಸಾಬ್ ರಾಜಾಸಾಬ್ ಬೇಪಾರಿ (35) ಎಂದು ಗುರುತಿಸಲಾಗಿದೆ.
ಇನ್ನು ಗೋಹತ್ಯೆ ನಿಷೇಧ ಕಾಯ್ದೆಯ ಅನುಷ್ಠಾನದ ಬಳಿಕ ವಿಜಯಪುರ ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರ ಸಮಯ ಪ್ರಜ್ಞೆ ಹಾಗೂ ಪೊಲೀಸ್ ಇಲಾಖೆಯ ಕಾರ್ಯಾಚರಣೆಯಿಂದ ಒಂದು ಎತ್ತಿನ ರಕ್ಷಣೆ ಆಗಿದೆ.