ಬೆಂಗಳೂರು,ಜ.22 (DaijiworldNews/HR): ಸಂಪುಟ ವಿಸ್ತರಣೆ ಬಳಿಕ ಖಾತೆ ವಿಚಾರವಾಗಿ ಅಸಮಾಧಾನಗೊಂಡಿದದ್ದ ಕೆಲವು ಸಚಿವರುಗಳ ಖಾತೆಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬದಲಾವಣೆ ಮಾಡಿದ್ದಾರೆ.
ಗೋಪಾಲಯ್ಯ, ಎಂ.ಟಿ.ಬಿ ನಾಗರಾಜು, ನಾರಾಯಣಗೌಡ, ಮಾಧುಸ್ವಾಮಿ ಅವರು ಗುರುವಾರ ತಮ್ಮ ಖಾತೆಗಳ ವಿಚಾರವಾಗಿ ಅಸಮಾಧಾನ ಹೊರ ಹಾಕಿದ್ದರು.
ಎಂಟಿಬಿ ನಾಗರಾಜ್ ಅಬಕಾರಿ ಖಾತೆ ಕೊಟ್ಟಿದ್ದಕ್ಕೆ ಮುನಿಸಿಕೊಂಡಿದ್ದರಿಂದ ಅವರಿಗೆ ಸ್ಥಳಿಯಾಡಳಿತ ಮತ್ತು ಸಕ್ಕರೆ ಖಾತೆ ನೀಡಲಾಗಿದೆ. ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆ ನೀಡಲಾಗಿದೆ.
ಇನ್ನು ವೈದ್ಯಕೀಯ ಶಿಕ್ಷಣ ಖಾತೆ ಪಡೆದು ಬೇಸರಗೊಂಡಿದ್ದ ಜೆ.ಸಿ ಮಾಧುಸ್ವಾಮಿ ಅವರಿಗೆ ಹೆಚ್ಚುವರಿಯಾಗಿ ಹಜ್ ಮತ್ತು ವಕ್ಫ್ ನೀಡಲಾಗಿದೆ. ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ತೋಟಗಾರಿಕೆ ಮತ್ತು ರೇಷ್ಮೆ ಖಾತೆಯನ್ನು ಆರ್ ಶಂಕರ್ಗೆ ನೀಡಲಾಗಿದ್ದು, ನಿನ್ನೆ ತೋಟಗಾರಿಕೆ ಮತ್ತು ಸಕ್ಕರೆ ಖಾತೆಯನ್ನು ಗೋಪಾಲಯ್ಯ ಅವರಿಗೆ ನೀಡಲಾಗಿತ್ತು.ಯುವಜನಸೇವೆ ಮತ್ತು ಕ್ರೀಡೆ ಖಾತೆ ಸಚಿವರಾಗಿದ್ದ ಕೆ.ಸಿ ನಾರಾಯಣ ಗೌಡ ಅವರಿಗೆ ಮುಖ್ಯಮಂತ್ರಿ ಅವರ ಬಳಿ ಇದ್ದ ಯೋಜನೆ, ಸಾಂಖ್ಯಿಕ ಅಂಕಿ ಅಂಶಗಳ ಖಾತೆಯನ್ನು ಹಂಚಿಕೆ ಮಾಡಲಾಗಿದೆ.