ಬೆಂಗಳೂರು,ಜ.22 (DaijiworldNews/HR): ಕರ್ನಾಟಕದಲ್ಲಿ ಒಟ್ಟು 1,38,656 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಕೆಲವರಿಗೆ ಮಾತ್ರ ಅಡ್ಡ ಪರಿಣಾಮವಾಗಿದೆ ಆದರೆ ಯಾರೂ ಕೂಡ ಮರಣ ಹೊಂದಿಲ್ಲ" ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "1,36,882 ಜನರಿಗೆ ಕೋವಿಶೀಲ್ಡ್, 1,774 ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದ್ದು, ಈ ಪೈಕಿ ಶೇ.2 ರಿಂದ 3.5 ಜನರಿಗೆ ಸ್ವಲ್ಪ ಅಡ್ಡಪರಿಣಾಮ ಉಂಟಾಗಿದೆ. 8,47,908 ಮಂದಿ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 3,27,201 ಸರ್ಕಾರಿ ಆರೋಗ್ಯ ಸಿಬ್ಬಂದಿ, 4,45,389 ಖಾಸಗಿ ಆರೋಗ್ಯ ಸಿಬ್ಬಂದಿ ಇದ್ದಾರೆ" ಎಂದರು.
"ಲಸಿಕೆ ಪಡೆದರೆ ಕೊರೊನಾದಿಂದ ದೂರವಿರಬಹುದು. ಕೆಲ ತಪ್ಪು ಮಾಹಿತಿಗಳಿಂದ ಅಂಜಿಕೆ ಉಂಟಾಗಿದೆ. 2 ನೇ ಹಂತದಲ್ಲಿ ರಾಜ್ಯದ ಒಂದೂವರೆಯಿಂದ ಎರಡು ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.
ಇನ್ನು "ತಜ್ಞರ ಪ್ರಕಾರ ಫೆಬ್ರವರಿಯಲ್ಲಿ ಎರಡನೇ ಅಲೆ ಸಾಧ್ಯತೆಗಳ ಹಿನ್ನೆಲೆಯಲ್ಲಿ ವೈಜ್ಞಾನಿಕ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಬೇಕಿತ್ತು ಎಂಬುದು ನನ್ನ ಅಭಿಪ್ರಾಯವಾಗಿದ್ದು, ಈ ಕುರಿತು ಮುಖ್ಯಮಂತ್ರಿಯವರಿಗೆ ತಿಳಿಸುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.