ಮಂಗಳೂರು, ಜ.22 (DaijiworldNews/HR): ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು 44.63 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ಉಳ್ಳಾಲ ಹಾಗೂ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 7 ಜನರನ್ನು ಬಂಧಿಸಿದ್ದಾರೆ.
ಬೀದರ್ ಮತ್ತು ತೆಲಂಗಾಣದಿಂದ ಎರಡು ಕಾರುಗಳಲ್ಲಿ ಬೃಹತ್ ಪ್ರಮಾಣದ ಗಾಂಜಾವನ್ನು ಮಂಗಳೂರು ನಗರಕ್ಕೆ ಸಾಗಿಸಲಾಗುತ್ತಿರುವ ಬಗ್ಗೆ ಮಂಗಳೂರು ನಗರ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ಉಳ್ಳಾಲ ಹಾಗೂ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದಾರೆ.
ಬಂಧಿತರನ್ನು ಬಂಟ್ವಾಳ ನಿವಾಸಿ ಅಜೀಜ್ (44) ಮೊಯ್ದಿನ್ ಹಫೀಸ್ (34), ತೆಲಂಗಾಣ ಮೂಲದ ವಿಠಲ್ ಚವ್ಹಾಣ (35), ಮತ್ತು ಬೀದರ್ ಮೂಲದ ಸಂಜು ಕುಮಾರ್,(34) ಮತ್ತು ಕಲ್ಲಪ್ಪ (40) ಎಂದು ಗುರುತಿಸಲಾಗಿದೆ.
ಆರೋಪಿಗಳ ವಶದಲ್ಲಿದ್ದ ಎರಡು ಕಾರುಗಳು, 40 ಕೆಜಿ ಗಾಂಜಾ ಮತ್ತು ಏಳು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಉಳ್ಳಾಲ ಪೊಲೀಸರು ಮತ್ತಷ್ಟು ತನಿಖೆ ನಡೆಸಿದ್ದು, ಬಂಟ್ವಾಳ ನಿವಾಸಿ ಮೊಹಮ್ಮದ್ ಹಫೀಜ್ (23) ಮತ್ತು ಗುರುಪುರದ ನಿವಾಸಿ ಸಂದೀಪ್ ಅವರನ್ನು ಬಂಧಿಸಿದ್ದಾರೆ.
9,75,000 ರೂ.ಗಳ ಒಟ್ಟು 44.63 ಕೆಜಿ ಗಾಂಜಾ, ಎರಡು ಕಾರುಗಳು, ಒಂದು ಸ್ಕೂಟರ್ ಮತ್ತು 23,25,000 ರೂ., ಏಳು ಮೊಬೈಲ್ ಫೋನ್ಗಳನ್ನು ಎರಡು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ, ಕೊಣಾಜೆ ಪೊಲೀಸ್ ಠಾಣೆಯಲ್ಲಿ 3 ಗಾಂಜಾ ಪ್ರಕರಣಗಳು ಮತ್ತು ಕಾವೂರು ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣಗಳು ಅಜೀಜ್ ವಿರುದ್ಧ ದಾಖಲಾಗಿವೆ, ಹನೀಜ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆ ಸೇರಿದಂತೆ 6 ಪ್ರಕರಣಗಳು ದಾಖಲಾಗಿವೆ, ಸಂಜು ಕುಮಾರ್ ವಿರುದ್ಧ ಆಂಧ್ರಪ್ರದೇಶದಲ್ಲಿ ಪ್ರಕರಣಗಳು ದಾಖಲಾಗಿವೆ. ಕಲ್ಲಪ್ಪ ಮತ್ತು ವಿಠಲ್ ಚವ್ಹಾಣ ವಿರುದ್ಧ ಆಂಧ್ರಪ್ರದೇಶದಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.