ತುಮಕೂರು,ಜ.22 (DaijiworldNews/HR): "ಜೀವನದಲ್ಲಿ ಮುಖ್ಯಮಂತ್ರಿ ಆಗುವ ಆಸೆ ಎಲ್ಲ ಶಾಸಕರಿಗೂ ಇರುತ್ತದೆ, ಅದರಂತೆ ನನಗೆ ಕೂಡ ಸಿ.ಎಂ ಆಗುವ ಆಸೆ ಇದೆ. ಆದರೆ ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಂದಿನ ದಿನಗಳಲ್ಲಿ ನೋಡೋಣ" ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಈ ಕುರಿತು ಸಿದ್ಧಗಂಗಾ ಮಠಕ್ಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಸನಗೌಡ ಪಾಟೀಲ ಯತ್ನಾಳ್ ನನ್ನ ಆತ್ಮೀಯ ಸ್ನೇಹಿತರಾಗಿದ್ದಾರೆ, ಈಗ ಅವರಿಗೆ 57 ವಯಸ್ಸು. ನನಗೆ 60 ವಯಸ್ಸು. ಪಕ್ಷದಲ್ಲಿ ನಾನು ಯತ್ನಾಳ್ ಅವರಿಗಿಂತ ಹಿರಿಯನಿದ್ದೇನೆ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನ ಪಡೆಯಲು ಗರಿಷ್ಠ ವಯೋಮಿತಿ 75 ವರ್ಷವಿದೆ. ಆದರೆ ಮುಖ್ಯಮಂತ್ರಿ ಬದಲಾವಣೆ ಮತ್ತು ನಾವು ಮುಖ್ಯಮಂತ್ರಿಯಾಗುವ ವಿಚಾರ ಸದ್ಯಕ್ಕೆ ಇಲ್ಲ" ಎಂದರು.
ಇನ್ನು "ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗಲೆಲ್ಲ ನಾನು ಪ್ರತ್ಯೇಕ ರಾಜ್ಯದ ಬಗ್ಗೆ ಧ್ವನಿ ಎತ್ತಿದ್ದೇನೆ, ಅನ್ಯಾಯವಾದರೆ ಈಗಲೂ ಧ್ವನಿ ಎತ್ತುತ್ತೇನೆ ಯಾಕೆಂದರೆ ಅದು ನನ್ನ ಜವಾಬ್ದಾರಿ" ಎಂದು ಹೇಳಿದ್ದಾರೆ.
"ನನಗೆ ವಿಶೇಷ ಖಾತೆಯನ್ನೇ ಮುಖ್ಯಮಂತ್ರಿ ನೀಡಿದ್ದಾರೆ, ಹಾಗಾಗಿ ಈ ನನಗೆ ಖಾತೆ ತೃಪ್ತಿ ನೀಡಿದೆ. ಇಂತಹ ಖಾತೆ ಬೇಡಿದರೂ ಸಿಗುವುದಿಲ್ಲ. ರಾಜ್ಯದ 4.36 ಕೋಟಿ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸಲಾಗುವುದು" ಎಂದರು.