ನವದೆಹಲಿ, ಜ.22 (DaijiworldNews/PY): "ನವ ಭಾರತಕ್ಕಾಗಿ ಆತ್ಮನಿರ್ಭರ್ ಭಾರತ ಅಭಿಯಾನದ ಮುಖೇನ ಕೆಲಸ ಮಾಡಿ" ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಅಸ್ಸಾಂನ ತೇಜ್ಪುರ ವಿಶ್ವವಿದ್ಯಾಲಯದ 18ನೇ ಫಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, "ಭಾರತವು 75ನೇ ಸ್ವಾತಂತ್ರ್ಯೋತ್ಸವಕ್ಕೆ ಪ್ರವೇಶಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಅಸ್ಸಾಂನ ಅಸಂಖ್ಯಾತ ಮಂದಿ ಕೊಡುಗೆ ನೀಡಿದ್ದಾರೆ. ಹಲವು ಮಂದಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ" ಎಂದರು.
"ಆಸ್ಟ್ರೇಲಿಯಾ ವಿರುದ್ದದ ಭಾರತೀಯ ತಂಡದ ಐತಿಹಾಸಿಕ ಗೆಲುವಿನಿಂದ ದೇಶದ ಯುವಜನತೆ ಸ್ಪೂರ್ತಿ ಪಡೆಯಬೇಕು. ಇದೇ ರೀತಿ ದೇಶದ ಸವಾಲುಗಳನ್ನು ಕೂಡಾ ಹಿಮ್ಮೆಟಿಸಬೇಕು" ಎಂದು ಹೇಳಿದರು.
"ಆಸ್ಟ್ರೇಲಿಯಾ ವಿರುದ್ದದ ಭಾರತೀಯ ತಂಡದ ಐತಿಹಾಸಿಕ ಗೆಲುವು ಬದಲಾವಣೆಗೆ ಉತ್ತಮ ಉದಾಹರಣೆಯಾಗಿದೆ. ಗಾಯಗಳಿಂದ ಬಳಲುತ್ತಿದ್ದರೂ ಕೂಡಾ ನಮ್ಮ ಆಟಗಾರರು ಗೆಲುವಿಗಾಗಿ ಹೋರಾಟ ನಡೆಸುತ್ತಲೇ ಇದ್ದರು. ಕೆಲವು ಆಟಗಾರರು ಕಡಿಮೆ ಅನುಭವ ಹೊಂದಿದ್ದರೂ ಕೂಡಾ ಅವರ ಧೈರ್ಯ ಕಡಿಮೆಯಿರಲಿಲ್ಲ. ಅವರು ಇತಿಹಾಸ ಸೃಷ್ಠಿಸಿದ್ದಾರೆ. ನಮ್ಮ ಆಟಗಾರರ ಈ ಸಾಧನೆಯೇ ನಮಗೆಲ್ಲರಿಗೂ ಜೀವನ ಪಾಠ" ಎಂದರು.
ಕೊರೊನಾ ವಿಚಾರವಾಗಿ ಮಾತನಾಡಿದ ಅವರು, "ಕೊರೊನಾ ಪ್ರಾರಂಭವಾದ ಸಂದರ್ಭ ಏನಾಗುತ್ತದೋ ಎನ್ನುವ ಆತಂಕವಿತ್ತು. ಆದರೆ, ದೇಶದ ಜನತೆ ಧೈರ್ಯದಿಂದ ಎಲ್ಲಾ ಆತಂಕವನ್ನು ಎದುರಿಸಿದ್ದಾರೆ. ಮೇಡ್ ಇನ್ ಇಂಡಿಯಾ ಪರಿಹಾರಗಳ ಮುಖೇನ ನಾವು ಕೊರೊನಾ ಸಾಂಕ್ರಾಮಿಕದ ವಿರುದ್ದ ಹೋರಾಡಿದ್ದೇವೆ" ಎಂದು ಹೇಳಿದರು.