ನವದೆಹಲಿ,ಜ.22 (DaijiworldNews/HR): "ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸರ್ಕಾರ ಸ್ಪಂದಿಸದೆ ದುರಂಹಕಾರ ಪ್ರಸರ್ಶಿಸುತ್ತಿದೆ" ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಈ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಮೂರು ಕೃಷಿ ಮಸೂದೆಗಳನ್ನು ಆತುರದಲ್ಲಿ ಜಾರೊಗೊಳಿಸಿದೆ ಮತ್ತು ಉದ್ದೇಶಪೂರ್ವಕವಾಗಿಯೇ ಸಂಸತ್ನಲ್ಲಿ ಚರ್ಚೆಗೆ ಹಾಗೂ ಪರಿಶೀಲನೆಗೆ ಅವಕಾಶ ನೀಡಲಿಲ್ಲ" ಎಂದು ದೂರಿದ್ದಾರೆ.
"ರೈತರ ಪ್ರತಿಭಟನೆ ಮುಂದುವರಿಯುತ್ತಲೇ ಇದೆ, ಆದರೆ ಸರ್ಕಾರ ಸೂಕ್ಷ್ಮತೆಯನ್ನೇ ಪ್ರದರ್ಶಿಸಲಿಲ್ಲ. ಕೇವಲ ನಾಟಕೀಯ ಸಮಾಲೋಚನೆಗಳನ್ನು ನಡೆಸಿದೆ. ಈ ಮಸೂದೆಗಳನ್ನು ಕಾಂಗ್ರೆಸ್ ಒಪ್ಪಿಕೊಂಡಿರಲಿಲ್ಲ. ಈ ಕೃಷಿ ಕಾಯ್ದೆಗಳು ಆಹಾರ ಭದ್ರತೆ ಮೂರು ಅಡಿಪಾಯಗಳಾದ ಕನಿಷ್ಠ ಬೆಂಬಲ ಬೆಲೆ, ಸಾರ್ವಜನಿಕವಾಗಿ ಸಂಗ್ರಹಿಸುವ ವ್ಯವಸ್ಥೆ ಮತ್ತು ಸಾರ್ವಜನಿಕವಾಗಿ ವಿತರಣೆ ವ್ಯವಸ್ಥೆಯನ್ನೇ ನಾಶಪಡಿಸಲಿವೆ" ಎಂದರು.
ಇನ್ನು ಬಜೆಟ್ ಅಧಿವೇಶನದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಅನೇಕ ವಿಷಗಳನ್ನು ಚರ್ಚಿಸಬಹುದು, ಆದರೆ ಸರ್ಕಾರ ಚರ್ಚೆ ನಡೆಸಲು ಒಪ್ಪುತ್ತದೆಯೇ ಅಥವಾ ಇಲ್ಲವೋ ಎಂಬುದನ್ನು ನೋಡಬೇಕಾಗಿದೆ" ಎಂದು ಹೇಳಿದ್ದಾರೆ.