ಬೆಂಗಳೂರು, ಜ.22 (DaijiworldNews/PY): ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊರೊನಾ ಪರೀಕ್ಷೆ ನಡೆಸಲಾಗಿದೆ. ಆದರೆ, ವರದಿ ನೆಗೆಟಿವ್ ಬಂದಿತ್ತು.
"ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸ್ಕ್ಯಾನ್ ಮಾಡಿಸಿದ ಸಂದರ್ಭ ಅವರಿಗೆ ಶ್ವಾಸಕೋಶದಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಸೇರಿದಂತೆ ವಿವಿಧ ಸಮಸ್ಯೆಗಳಿವೆ" ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಅಧೀಕ್ಷಕ ಡಾ. ರಮೇಶ್ ಕೃಷ್ಣನ್ ಹೇಳಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷದಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಅವರು ಜೈಲುವಾಸ ಶಿಕ್ಷೆ ಮುಗಿಸಿ ಜನವರಿ 27ಕ್ಕೆ ಜೈಲಿನಿಂದ ಬಿಡುಗಡೆ ಹೊಂದುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದ್ದು ಈ ನಡುವೆ ಅವರಿಗೆ ಕೊರೊನಾ ದೃಢಪಟ್ಟ ಕಾರಣ ಜೈಲಿನಿಂದ ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.