ಬೆಂಗಳೂರು, ಜ.22 (DaijiworldNews/PY): ಶಿವಮೊಗ್ಗದ ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಡೈನಾಮೈಟ್ ಸ್ಪೋಟಗೊಂಡು ಹಲವು ಮಂದಿ ಕಾರ್ಮಿಕರು ಮೃತಪಟ್ಟ ಘಟನೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ನೋವು ವ್ಯಕ್ತಪಡಿಸಿದ್ದು, "ಘಟನೆಯ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು" ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ಅನೇಕ ಕಾರ್ಮಿಕರು ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ" ಎಂದಿದ್ದಾರೆ.
"ಕಲ್ಲು ಕ್ವಾರಿಯಲ್ಲಿ ನಡೆದ ಈ ಸ್ಫೋಟದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಎಚ್ಚರವಹಿಸಬೇಕು" ಎಂದು ಆಗ್ರಹಿಸಿದ್ದಾರೆ.
ಅಬ್ಬಲಗೆರೆ-ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಡೈನಾಮೈಟ್ ಗುರುವಾರ ರಾತ್ರಿ ಸ್ಫೋಟಿಸಿ, ಬಿಹಾರ ಮೂಲದ 15 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತಂದಿದ್ದ 50 ಡೈನಾಮೈಟ್ ಬಾಕ್ಸ್ಗಳು ಸ್ಫೋಟಗೊಂಡಿದ್ದು ಕಾರ್ಮಿಕರ ದೇಹಗಳು ಸಂಪೂರ್ಣವಾಗಿ ಛಿದ್ರವಾಗಿವೆ.