ಬೆಂಗಳೂರು, ಜ.22 (DaijiworldNews/PY): ಶಿಮೊಗ್ಗದ ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಡೈನಾಮೈಟ್ ಸ್ಪೋಟಗೊಂಡು ಹಲವು ಮಂದಿ ಕಾರ್ಮಿಕರು ಮೃತಪಟ್ಟ ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಶಿವಮೊಗ್ಗದ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದ ಸುದ್ದಿ ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ. ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ತಡರಾತ್ರಿಯಿಂದಲೇ ಸಂಪರ್ಕದಲ್ಲಿದ್ದು, ಅಗತ್ಯ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೆಲ್ಲರೂ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುರ್ಘಟನೆಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ" ಎಂದಿದ್ದಾರೆ.
ಅಬ್ಬಲಗೆರೆ-ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಡೈನಾಮೈಟ್ ಗುರುವಾರ ರಾತ್ರಿ ಸ್ಫೋಟಿಸಿ, ಬಿಹಾರ ಮೂಲದ 15 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತಂದಿದ್ದ 50 ಡೈನಾಮೈಟ್ ಬಾಕ್ಸ್ಗಳು ಸ್ಫೋಟಗೊಂಡಿದ್ದು ಕಾರ್ಮಿಕರ ದೇಹಗಳು ಸಂಪೂರ್ಣವಾಗಿ ಛಿದ್ರವಾಗಿವೆ.