ಬೆಂಗಳೂರು, ಜ.22 (DaijiworldNews/PY): ಅಬ್ಬಲಗೆರೆ–ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಡೈನಾಮೈಟ್ ಸ್ಪೋಟದಿಂದ ಸಾವನ್ನಪ್ಪಿದ ಕಾರ್ಮಿಕರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಶಿವಮೊಗ್ಗದಲ್ಲಿ ನಡೆದ ಘಟನೆಯಲ್ಲಿ ಜೀವಗಳು ಸಾವಿಗೀಡಾಗಿರುವುದು ದುಃಖ ತಂದಿದೆ. ಅವರ ಕುಟುಂಬಗಳಿಗೆ ಸಂತಾಪ ತಿಳಿಸುವೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತದೆ" ಎಂದು ತಿಳಿಸಿದ್ದಾರೆ.
ಅಬ್ಬಲಗೆರೆ–ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಡೈನಾಮೈಟ್ ಗುರುವಾರ ರಾತ್ರಿ ಸ್ಫೋಟಿಸಿ, ಬಿಹಾರ ಮೂಲದ 15 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತಂದಿದ್ದ 50 ಡೈನಾಮೈಟ್ ಬಾಕ್ಸ್ಗಳು ಸ್ಫೋಟಗೊಂಡಿದ್ದು ಕಾರ್ಮಿಕರ ದೇಹಗಳು ಸಂಪೂರ್ಣವಾಗಿ ಛಿದ್ರವಾಗಿವೆ.
ಭೂಕಂಪನದ ಸಂದರ್ಭದಲ್ಲೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಭೂಮಿ ಕಂಪಿಸಿದ ವೇಳೆ ಸ್ಪೋಟವಾಗಿರುವ ಸಾಧ್ಯತೆಯಿದೆ ಎಂದು ಕೂಡಾ ಹೇಳಲಾಗಿದೆ. ಆದರೆ ಇನ್ನು ಕೆಲವರು ಸ್ಫೋಟದಿಂದಲೇ ಭೂಕಂಪನದ ಅನುಭವವಾಗಿದೆ ಎಂದು ಹೇಳಿದ್ದಾರೆ.