ಬೆಂಗಳೂರು, ಜ.22 (DaijiworldNews/PY): ವಿನ್ಯಾಸ ಹಾಗೂ ನಕ್ಷೆಗೆ ರಾಜ್ಯ ಗೃಹ ನಿರ್ಮಾಣದಿಂದ ಅನುಮೋದನೆ ಪಡೆಯದೇ ನಿರ್ಮಿಸಿರುವ 65 ಕಾಮಗಾರಿಗಳಿಗೆ ಹಾಗೂ ಪೂರ್ಣಗೊಳಿಸಲು ಬಾಕಿ ಉಳಿದಿರುವ ಒಟ್ಟು 65 ವಸತಿ ಬಡಾವಣೆಗಳ ಯಥಾಸ್ಥಿತಿ ಬದಲಾವಣೆಗೆ ಸಚಿವ ಸಂಪುಟ ಅನುಮೋದನೆ ನೀಡಲು ಅನುಮತಿ ಸೂಚಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, "ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ವಿನ್ಯಾಸ ಹಾಗೂ ನಕ್ಷೆಗೆ ರಾಜ್ಯ ಗೃಹ ನಿರ್ಮಾಣದಿಂದ ಅನುಮೋದನೆ ಪಡೆಯದೇ ನಿರ್ಮಿಸಿರುವ ಹಾಗೂ ಉಳಿದ 134 ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ" ಎಂದು ಹೇಳಿದ್ದಾರೆ.
"2021ನೇ ಸಾಲಿನಲ್ಲಿ ಸುಮಾರು 1500 ವಿಕಲ ಚೇತನರಿಗೆ ತ್ರಿಚಕ್ರ ವಾಹನಗಳನ್ನು ಖರೀದಿ ಮಾಡಲು 12.75 ಕೋಟಿ ರೂ. ಯೋಜನೆಗೆ ಆಡಳಿತಾತ್ಮಕ ಮಂಜೂರು ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
"ರಾಜ್ಯ ವಿಸ್ತೃತ ಜಾಲ ಯೋಜನೆಯಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಸೇವೆಗಳ ಅನುಷ್ಠಾನಕ್ಕಾಗಿ ಜಾರಿಗೊಳಿಸಲು 35 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ" ಎಂದು ಹೇಳಿದ್ದಾರೆ.