ಶಿವಮೊಗ್ಗ, ಜ.22 (DaijiworldNews/MB) : ಅಬ್ಬಲಗೆರೆ–ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಡೈನಾಮೈಟ್ ಗುರುವಾರ ರಾತ್ರಿ ಸ್ಫೋಟಿಸಿ, ಬಿಹಾರ ಮೂಲದ 10 ಕ್ಕೂ ಅಧಿಕ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತಂದಿದ್ದ 50 ಡೈನಾಮೈಟ್ ಬಾಕ್ಸ್ಗಳು ಸ್ಫೋಟಗೊಂಡಿದ್ದು ಕಾರ್ಮಿಕರ ದೇಹಗಳು ಸಂಪೂರ್ಣವಾಗಿ ಛಿದ್ರವಾಗಿವೆ. ಸ್ಥಳದಲ್ಲಿದ್ದ ಯಾರೊಬ್ಬರು ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಮಾಧ್ಯಮ ವರದಿ ಮಾಡಿದೆ.
ಭೂಕಂಪನದ ಸಂದರ್ಭದಲ್ಲೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಭೂಮಿ ಕಂಪಿಸಿದ ವೇಳೆ ಸ್ಪೋಟವಾಗಿರುವ ಸಾಧ್ಯತೆಯಿದೆ ಎಂದು ಕೂಡಾ ಹೇಳಲಾಗಿದೆ. ಆದರೆ ಇನ್ನು ಕೆಲವರು ಸ್ಫೋಟದಿಂದಲೇ ಭೂಕಂಪನದ ಅನುಭವವಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ಹಲವು ಕಡೆಗಳಲ್ಲಿ ಭಾರೀ ಶಬ್ದ ಕೇಳಿಬಂದಿತ್ತು. ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದರು. ಗುರುವಾರ ರಾತ್ರಿ ಸುಮಾರು 10:20 ಕ್ಕೆ ಕೇಳಿ ಬಂದ ಈ ಭಾರೀ ಸದ್ದು ಕೇಳಿ ಜನರು ರಸ್ತೆಗೆ ದೌಡಾಯಿಸಿದ್ದರು.
ಸ್ಪೋಟವಾದ ರೀತಿ ಭಾರೀ ಶಬ್ದವಾಗಿದ್ದು ಕಂಪನದ ಅನುಭವವೂ ಆಗಿದೆ ಎಂದು ವರದಿಯಾಗಿದೆ. ಇನ್ನು ಭದ್ರಾವತಿಯಲ್ಲಿ ಶಬ್ದದ ತೀವ್ರತೆಗೆ ಮನೆಯ ಕಿಟಕಿಗಳ ಗಾಜುಗಳು ಒಡೆದಿದೆ ಎಂದು ವರದಿ ತಿಳಿಸಿದೆ.