ಶಿವಮೊಗ್ಗ, ಜ.22 (DaijiworldNews/MB) : ಜಿಲ್ಲೆಯ ಹಲವು ಕಡೆಗಳಲ್ಲಿ ಭಾರೀ ಶಬ್ದ ಕೇಳಿಬಂದಿದ್ದು ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಗುರುವಾರ ರಾತ್ರಿ ಸುಮಾರು 10:20 ಕ್ಕೆ ಕೇಳಿ ಬಂದ ಈ ಭಾರೀ ಸದ್ದು ಕೇಳಿ ಜನರು ರಸ್ತೆಗೆ ದೌಡಾಯಿಸಿದ್ದಾರೆ.
ಶಿವಮೊಗ್ಗ ನಗರ, ಭದ್ರಾವತಿ, ಹೊಳೆಹೊನ್ನೂರು, ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ ಪಕ್ಕದ ತರೀಕೆರೆ ತಾಲ್ಲೂಕಿನಲ್ಲೂ ಈ ಶಬ್ದ ಕೇಳಿ ಬಂದಿದ್ದು ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ.
ಸ್ಪೋಟವಾದ ರೀತಿ ಭಾರೀ ಶಬ್ದವಾಗಿದ್ದು ಕಂಪನದ ಅನುಭವವೂ ಆಗಿದೆ ಎಂದು ವರದಿಯಾಗಿದೆ. ಇನ್ನು ಭದ್ರಾವತಿಯಲ್ಲಿ ಶಬ್ದದ ತೀವ್ರತೆಗೆ ಮನೆಯ ಕಿಟಕಿಗಳ ಗಾಜುಗಳು ಒಡೆದಿದೆ ಎಂದು ವರದಿ ತಿಳಿಸಿದೆ.
ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸೂಪರ್ ಸಾನಿಕ್ ವಿಮಾನದಿಂದ ಹೊರಬಂದ ಶಬ್ದವೂ ಭಾರೀ ಆತಂಕ ಉಂಟು ಮಾಡಿತ್ತು.