ಉಳ್ಳಾಲ, ಜ 21(DaijiworldNews/SM): ಭಾರೀ ಪ್ರಮಾಣದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ತಂಡವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಗಳನ್ನು ಬಂಧಿಸಿ ಗಾಂಜಾ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಕೊಣಾಜೆ ಮತ್ತು ಉಳ್ಳಾಲ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ನರಿಂಗಾನದ ತೌಡುಗೋಳಿ ಕ್ರಾಸ್ ನಿವಾಸಿ ಅಬ್ದುಲ್ ಅಝೀಝ್ ಯಾನೆ ಪೋಕರ್ ಅಝೀಝ್(40) ಮತ್ತು ಹಫೀಝ್ ಯಾನೆ ಅಪ್ಪಿ ಯಾನೆ ಮೊಯ್ದೀನ್(34) ಬಂಧಿತ ಆರೋಪಿಗಳಾಗಿದ್ದಾರೆ.
ಕುತ್ತಾರಿನ ದೆಕ್ಕಾಡು ಪರಿಸರದಲ್ಲಿ ಇಬ್ಬರು ಆರೋಪಿಗಳು 23.980 ಕೆ.ಜಿ. ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ತಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ತೆಲಂಗಾಣ ಮೂಲದ ವಿಠಲ್ ಚೌಹಾನ್ ಮತ್ತು ಬೀದರ್ ನಿವಾಸಿಗಳಾದ ಸಂಜೀವ್ ಕುಮಾರ್ ಹಾಗೂ ಕಲ್ಲಪ್ಪ ಎಂಬವರನ್ನು ದೇರಳಕಟ್ಟೆಯಿಂದ ಮುಡಿಪು ಕಡೆಗೆ ಮಹಾರಾಷ್ಟ್ರ ನೋಂದಾಯಿತ ವರ್ನಾ ಕಾರಿನಲ್ಲಿ ಗಾಂಜಾ ಸಾಗಾಟ ನಡೆಸುತ್ತಿರುವಾಗ ವಶಕ್ಕೆ ಪಡೆಯಲಾಗಿದೆ.
ಇವರಿಂದ ಸುಮಾರು 15 ಕೆ.ಜಿ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.