ಬೆಂಗಳೂರು, ಜ.21 (DaijiworldNews/PY): ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರ ನಡುವಿನ 10ನೇ ಸುತ್ತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಸ್ತಾಪದ ಬಗ್ಗೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, "ರೈತರಿಗೆ ಕಾಯ್ದೆಯೇ ಬೇಡವೆಂದ ಮೇಲೆ ಕಾಯ್ದೆ ಜಾರಿ ಮಾಡಲು ಸರ್ಕಾರದ ಈ ಸರ್ಕಸ್ ಏತಕ್ಕಾಗಿ?. ಮೋದಿಯವರೆ ರಂಗತಾಲೀಮು ಬಿಡಿ..ಕಾಯ್ದೆ ರದ್ದುಗೊಳಿಸಿ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೃಷಿ ಕಾಯ್ದೆಗಳನ್ನು 1.5 ವರ್ಷ ಸ್ಥಗಿತಗೊಳಿಸುವ ಕೇಂದ್ರದ ಪ್ರಸ್ತಾಪ ಮರಣದಂಡನೆಯನ್ನು ಮುಂದೂಡಿದಂತೆ ಹೊರತು ಶಿಕ್ಷೆ ರದ್ದು ಮಾಡಿದ ಅರ್ಥವಲ್ಲ. ರೈತರ ಬೇಡಿಕೆಗೆ ಇದು ಶಾಶ್ವತ ಪರಿಹಾರವಲ್ಲ. ರೈತರಿಗೆ ಕಾಯ್ದೆಯೇ ಬೇಡವೆಂದ ಮೇಲೆ ಕಾಯ್ದೆ ಜಾರಿ ಮಾಡಲು ಸರ್ಕಾರದ ಈ ಸರ್ಕಸ್ ಏತಕ್ಕಾಗಿ?.ಮೋದಿಯವರೆ ರಂಗತಾಲೀಮು ಬಿಡಿ..ಕಾಯ್ದೆ ರದ್ದುಗೊಳಿಸಿ" ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಹಾಗೂ ರೈತ ಮುಖಂಡರ ನಡುವೆ ಬುಧವಾರ ನಡೆದ ಹತ್ತನೇ ಸುತ್ತಿನ ಮಾತುಕತೆಯಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿಟ್ಟು ಕಾಯ್ದೆಗಳ ವಿಚಾರವಾಗಿ ಚರ್ಚೆ ನಡೆಸಲು ಸಮಿತಿಯನ್ನು ರಚಿಸುವುದಾಗಿ ಸರ್ಕಾರ ತಿಳಿಸಿದ್ದು, ಆದರೆ, ರೈತರು ತಕ್ಷಣವೇ ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿಲ್ಲ. ಬದಲಾಗಿ, ಆಂತರಿಗೆ ಸಭೆ ನಡೆಸಿ ಈ ವಿಚಾರದ ಬಗ್ಗೆ ಸೂಕ್ತವಾದ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.