ನವದೆಹಲಿ, ಜ.21 (DaijiworldNews/PY): ನಗರ ಪ್ರದೇಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸರ್ಕಾರವು 1.68 ಲಕ್ಷಕ್ಕೂ ಅಧಿಕ ಮನೆ ನಿರ್ಮಾಕ್ಕೆ ಅನುಮೋದನೆ ನೀಡಿದೆ. ಇಲ್ಲಿಯವರೆಗೆ ಮಂಜೂರಾದ ಒಟ್ಟು ಮನೆಗಳ ಸಂಖ್ಯೆಯನ್ನು 1.1 ಕೋಟಿಗೆ ಹೆಚ್ಚಿಸುವ ಕ್ರಮ ಕೈಗೊಂಡಿದೆ ಎಂದು ಗುರುವಾರ ಸರ್ಕಾರಿ ಪ್ರಕಟಣೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
"ಕೇಂದ್ರ ಮಂಜೂರಾತಿ ಹಾಗೂ ಮಾನಿಟರಿಂಗ್ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜ.20ರ ಬುಧವಾರದಂದು ನಡೆದ ಈ ಸಭೆಯಲ್ಲಿ 14 ರಾಜ್ಯಗಳು ಪಾಲ್ಗೊಂಡಿದ್ದವು" ಎಂದು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
"ಅಡಿಪಾಯ, ಅಂತರ್-ನಗರ ವಲಸೆ ಹಾಗೂ ಇತರೆ ಆದ್ಯತೆಗಳ ಬದಲಾವಣೆ ಈ ರೀತಿಯಾದ ಸಮಸ್ಯೆಗಳ ಕಾರಣ ರಾಜ್ಯಗಳು ಯೋಜನೆಯ ಪರಿಷ್ಕರಣೆಯ ನಿಟ್ಟಿನಲ್ಲಿ ಪ್ರಸ್ತಾಪ ಮಂಡಿಸಿವೆ" ಎಂದು ಸಚಿವಾಲಯ ಹೇಳಿದೆ.
"ಈವರೆಗೆ ಪಿಎಂಎವೈ ಅಡಿಯಲ್ಲಿ 41 ಲಕ್ಷ ಮನೆಗಳು ಪೂರ್ಣಗೊಂಡಿವೆ. 70 ಲಕ್ಷಕ್ಕೂ ಅಧಿಕ ಮನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ" ಎಂದು ತಿಳಿಸಿದೆ.
"ಪಿಎಂಎವೈ ಅಡಿಯಲ್ಲಿ ಕೇಂದ್ರ ಮಂಜೂರಾತಿ ಹಾಗೂ ಮಾನಿಟರಿಂಗ್ ಸಮಿತಿ ಸಭೆಯಲ್ಲಿ 1,68,606 ನೂತನ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ" ಎಂದು ಸಚಿವಾಲಯ ತಿಳಿಸಿದೆ.
ಜೂನ್ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಪಿಎಂಎವೈ 2022ರ ವೇಳೆಗೆ ಎಲ್ಲರಿಗೂ ವಸತಿ ಕಲ್ಪಿಸುವ ಉದ್ದೇಶ ಹೊಂದಿದೆ.
ದೇಶದ ನಗರ ಪ್ರದೇಶಗಳಲ್ಲಿ 2015-2022ರವರೆಗೆ ಏಳು ವರ್ಷಗಳ ಅವಧಿಯಲ್ಲಿ 1.12 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.