ಮಂಗಳೂರು, ಜ.21 (DaijiworldNews/PY): ಯುವತಿಗೆ ಖಾಸಗಿ ಬಸ್ನಲ್ಲಿ ಸಹ ಪ್ರಯಾಣಿಕನೋರ್ವ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯ ಹಾಗೂ ಸಂತ್ರಸ್ತೆ ಯುವತಿಯ ಜೊತೆ ನಗರ ಕಮೀಷನರ್ ಎನ್. ಶಶಿಕುಮಾರ್ ಅವರು ಮಂಗಳೂರು ಕಮೀಷನರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಕಮೀಷನರ್ ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ಯುವತಿ ಕಾಮುಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈ ರೀತಿಯಾದ ಘಟನೆಗಳು ನಡೆದರೆ ಮಹಿಳೆಯರು ಎಚ್ಚರಿಕೆ ವಹಿಸಬೇಕು. ಬಸ್ ನಿರ್ವಾಹಕ ಹಾಗೂ ಪ್ರಯಾಣಿಕರು ಈ ರೀತಿಯ ಘಟನೆ ನಡೆದ ಸಂದರ್ಭ ಪ್ರತಿಕ್ರಿಯೆ ನೀಡಲು ವಿಫಲರಾಗಿದ್ದಾರೆ ಎನ್ನುವ ವಿಚಾರ ಆಘಾತಕಾರಿಯಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಸಿಸಿಟಿವಿ ಅಳವಡಿಸುವ ಬಗ್ಗೆ ನಾವು ಉಪ ಆಯುಕ್ತರೊಂದಿಗೆ ಶೀಘ್ರವಾಗಿ ಚರ್ಚಿಸುತ್ತೇವೆ" ಎಂದು ಹೇಳಿದ್ದಾರೆ.
"ಬಸ್ನಲ್ಲಿ ಕಿರುಕುಳ ನೀಡಿದ್ದಾರೆ ಎನ್ನುವ ವಿಚಾರವನ್ನು ಮುಂದೆ ಹೇಳಿರುವ ಈ ಧೈರ್ಯಶಾಲಿ ಯುವತಿಗೆ ಧನ್ಯವಾದ ತಿಳಿಸುತ್ತೇನೆ. ಇನ್ನು ಮುಂದೆ ಈ ರೀತಿಯಾದ ಘಟನೆಗಳು ನಡೆದಲ್ಲಿ ಖಂಡಿತವಾಗಿಯೂ ಯುವತಿಯರು ಧ್ವನಿ ಎತ್ತುತ್ತಾರೆ. ಇಂತಹ ಘಟನೆಗಳು ನಡೆದ ಸಂದರ್ಭ ದೂರು ನೀಡಲು ಹಿಂಜರಿಯುವ ಹಲವಾರು ಘಟನೆಗಳು ಇರಬಹುದು. ಯಾವುದೇ ಮಹಿಳೆಗೆ ಈ ರೀತಿಯ ಘಟನೆಯ ಅನುಭವವಾದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ. ಈ ವೇಳೆ Moms Mangalore ಸಂಘಟನೆಯ ಡಾ.ವಿದ್ಯಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ" ಎಂದರು.
"ಈ ರೀತಿಯಾದ ಘಟನೆ ನಡೆದಲ್ಲಿ ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ನೆನಪಿನಲ್ಲಿಟ್ಟುಕೊಂಡು ಮಧ್ಯಪ್ರವೇಶಿಸಬೇಕು. ಕಾನೂನು ಕೈಗೆ ತೆಗೆದುಕೊಳ್ಳಬೇಕು. ಆದರೆ, ಪೊಲೀಸರಿಗೆ ಮಾಹಿತಿ ನೀಡಬೇಕು" ಎಂದು ಹೇಳಿದರು.
ಬಳಿಕ ಕಮೀಷನರ್ ಎನ್ ಶಶಿಕುಮಾರ್ ಅವರು ಯುವತಿಯನ್ನು ಸನ್ಮಾನಿಸಿದರು. ಹಾಗೂ ಆರೋಪಿಯ ಪತ್ತೆ ಮಾಡಿ ಬಂಧಿಸಿದ ಪೊಲೀಸ್ ತಂಡಕ್ಕೆ 10,000 ರೂ. ಗಳ ಬಹುಮಾನ ಘೋಷಿಸಿದರು.
ಜ.14ರ ಗುರುವಾರದಂದು ಮಧ್ಯಾಹ್ನ 3.45ರ ಸುಮಾರಿಗೆ ಯುವತಿಯೊಬ್ಬಳು ಖಾಸಗಿ ಬಸ್ನಲ್ಲಿ ದೇರಳಕಟ್ಟೆಯಿಂದ ಪಂಪ್ವೆಲ್ಗೆ ತೆರಳುತ್ತಿದ್ದರು. ಈ ಸಂದರ್ಭ ಆಕೆಯ ಪಕ್ಕ ಕುಳಿತ ಸಹ ಪ್ರಯಾಣಿಕನೋರ್ವ ಆಕೆಯ ದೇಹ ಸ್ಪರ್ಶಿಸಲು ಆರಂಭಿಸಿದ್ದಾನೆ. ಈ ವೇಳೆ ಆಕೆ ವಿರೋಧ ವ್ಯಕ್ತಪಡಿಸಿದರೂ ಬಸ್ನಲ್ಲಿ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಆಕೆಯ ಬೆಂಬಲಕ್ಕೆ ಮುಂದಾಗಿರಲಿಲ್ಲ. ಬಳಿಕ ಯುವತಿ ಈ ಘಟನೆಯ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಅನ್ನು ಓದುವ ಮಹಿಳೆಯರು ಅಥವಾ ಪುರುಷರು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ಸಾಧ್ಯವಾದಷ್ಟು ಈ ಪೋಸ್ಟ್ ಅನ್ನು ಶೇರ್ ಮಾಡಿ. ಇದರಿಂದ ಈ ರೀತಿಯಾದಲ್ಲಿ ಮಹಿಳೆಯರು ಅಥವಾ ಹುಡುಗಿಯರು ಮೌನವಾಗಿರುವ ಬದಲು ಧ್ವನಿ ಎತ್ತುತ್ತಾರೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದರು.