ಗುವಾಹಟಿ, ಜ.21 (DaijiworldNews/MB) : ''ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದ 3,500 ಮಸೀದಿಗಳನ್ನು ನೆಲಸಮ ಮಾಡಲಿದೆ'' ಎಂದು ಅಸ್ಸಾಂ ಸಂಸದ, ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಎಐಯುಡಿಎಫ್) ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್ ಹೇಳಿದರು.
ತಮ್ಮ ಧುಬ್ರಿ ಕ್ಷೇತ್ರದ ಗೌರಿಪುರದಲ್ಲಿ ಬುಧವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ''ಬಿಜೆಪಿ ಪಟ್ಟಿಯಲ್ಲಿ ನಿಮ್ಮ ಪ್ರದೇಶದ ವಿವಿಧ ಮಸೀದಿಗಳಿದ್ದು ಭಾರತದಲ್ಲಿರುವ 3,500 ಮಸೀದಿಗಳು ಆ ಪಟ್ಟಿಯಲ್ಲಿವೆ. ಭಾರತದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಮಸೀದಿಗಳನ್ನು ನೆಲಸಮ ಮಾಡಲಿದೆ'' ಎಂದು ಹೇಳಿದರು.
ಇನ್ನು ಕೇಂದ್ರ ಸರ್ಕಾರದ ತ್ರಿವಳಿ ತಲಾಖ್ ಕಾನೂನಿನ ವಿರುದ್ದ ಹರಿಹಾಯ್ದ ಅವರು, ''ಕುರಾನ್ನಲ್ಲಿ ತಲಾಖ್ಗೆ ಅವಕಾಶವಿದೆ. ಇದು ಅಲ್ಲಾಹನ ಮಾತಾಗಿದೆ. ಆದರೆ ಮೋದಿ ಅದನ್ನೂ ಕೂಡಾ ನಾಶ ಮಾಡಿದರು'' ಎಂದು ಕಿಡಿಕಾರಿದರು.
''ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಬುರ್ಖಾ ಧರಿಸುವುದು, ಮುಸ್ಲಿಮರು ಅಜಾನ್ ಹೇಳುವುದಕ್ಕೂ ಅವಕಾಶ ಇರುವುದಿಲ್ಲ'' ಎಂದು ಹೇಳಿದರು.